ಜಾತಿ ವ್ಯವಸ್ಥೆ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.8: ‘ಸ್ವಾತಂತ್ರ್ಯದ ಉದ್ದೇಶ ಈಡೇರಬೇಕಾದರೆ ಸಮಾಜದಲ್ಲಿ ಅವಕಾಶ ಮತ್ತು ಸಂಪತ್ತು ಸಮಾನ ಹಂಚಿಕೆಯಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಶುಕ್ರವಾರ ಗಾಂಧಿ ಭವನದಲ್ಲಿ ಕಮಲಾ ಹಂಪಾನಾ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಬೆಳಕು ಬಿತ್ತಿದವರು', ‘ಪ್ರಾಕೃತಾ ಕಥಾ ಸಾಹಿತ್ಯ' ಮತ್ತು ‘ದಿ ಜರ್ನಿ ಆಫ್ ಲೈಫ್’ ಕೃತಿಗಳ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ಆಸ್ತಿ-ಉತ್ಪಾದನೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಗ್ರಹ ಆಗುತ್ತಿರುವುದರಿಂದ ಸಾಮಾಜಿಕ-ಆರ್ಥಿಕ ಅಸಮಾನತೆ ಮುಂದುವರೆಯುತ್ತಿದೆ. ಇಂತಹ ಸ್ಥಿತಿ ಬದಲಾಗಬೇಕು ಎಂದರು.
ಜಾತಿ ನಾಶವಾಗದೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಅಂತರ್ಜಾತಿ ವಿವಾಹ ಜಾತಿ ವಿನಾಶದ ಪ್ರಥಮ ಹೆಜ್ಜೆ. ನಮ್ಮ ಸಂವಿಧಾನ ಕೂಡ ನಮ್ಮದು ಜಾತ್ಯತೀತ ಸಮಾಜ ಎಂದು ಹೇಳಿದೆ. ಆ ಕಾಲದಲ್ಲೇ ಅಂತರ್ಜಾತಿ ವಿವಾಹವಾಗಿ ತಮ್ಮ ಮೂವರೂ ಮಕ್ಕಳನ್ನು ಅಂತರ್ಜಾತಿ ವಿವಾಹ ಮಾಡಿರುವ ಹಂಪ ನಾಗರಾಜಯ್ಯ ಮತ್ತು ಕಮಲಾ ಹಂಪನ ಅವರು ನಿಜಕ್ಕೂ ಆದರ್ಶ ದಂಪತಿ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತಿ ಯಾವುದಿದ್ದರೂ ನಾವು ಅಂತಿಮವಾಗಿ ಮನುಷ್ಯರಾಗಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ದ್ವೇಷಿಸುವುದು ಅದರ್ಮ. ಆದರೆ ಇಂದು ದ್ವೇಷವನ್ನು ಆರಾಧಿಸುವ ಸಮಾಜವನ್ನು ನಿರ್ಮಿಸುವ ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪ್ರಜ್ಞಾವಂತರಾದ ನಾವೆಲ್ಲರೂ ತಡೆ ಹಾಕಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಹಂಪಾನಾ ಮತ್ತು ಕಮಲಾ ಹಂಪಾನಾ ಇಬ್ಬರೂ ಅವಿಶ್ರಾಂತ ಸಾಹಿತಿಗಳಾಗಿದ್ದಾರೆ. ಅವರ ಬರವಣಿಗೆ ಕೃಷಿಗೆ ನಿವೃತ್ತಿ ಎಂಬುದಿಲ್ಲ. ಅವರ ಈ ಸಾಹಿತ್ಯ ಕೈಂಕರ್ಯ ಹೀಗೆ ಸಾಗಲಿ ಎಂದರು.
ಪರಂಪರೆಯ ಪ್ರಜ್ಞೆ ಸದಾ ಚಲನಶೀಲವಾಗಿದ್ದು, ಅದಕ್ಕೊಂದು ಚಾರಿತ್ರಿಕ ನೆಲೆಗಟ್ಟು ಇರುತ್ತದೆ. ಅಂತೆಯೇ ಈ ಇಬ್ಬರ ಕೃತಿಗಳು ನಮಗೆ ಪರಂಪರೆಯ ಪ್ರಜ್ಞೆ ಮತ್ತು ಸಮಕಾಲೀನ ಪ್ರಜ್ಞೆಗಳೆರಡರ ತಿಳುವಳಿಕೆಯನ್ನು ಕೊಡುತ್ತದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ, ನಮ್ಮ ಮುಪ್ಪಿನಲ್ಲಿ ನೀವೆಲ್ಲರೂ ತೋರುತ್ತಿರುವ ಪ್ರೀತಿ ಅವರ್ಣನೀಯವಾದದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿದ್ದಾರೆ. ಅಂತೆಯೇ ಅವರು ರಾಜ್ಯದಲ್ಲಿ ಪ್ರಾಕೃತ ವಿಶ್ವ ವಿದ್ಯಾಲಯ ಸ್ಥಾಪಿಸಲು ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಹಿರಿಯ ಸಾಹಿತಿ ಕಮಲಾ ಹಂಪನಾ, ಲೇಖಕ ಜಿ.ಎನ್.ಮೋಹನ್ ಉಪಸ್ಥಿತರಿದ್ದರು.