ಬಾಬಾ ಬುಡಾನ್ ದರ್ಗಾ ವ್ಯವಸ್ಥಾಪನ ಸಮಿತಿ ವಜಾಕ್ಕೆ ಒತ್ತಾಯಿಸಿ ಸರಕಾರಕ್ಕೆ ಮನವಿ
ಚಿಕ್ಕಮಗಳೂರು, ಆ.20: ಇಲ್ಲಿನ ಬಾಬಾ ಬುಡಾನ್ ದರ್ಗಾ ವ್ಯವಸ್ಥಾಪನ ಸಮಿತಿಯನ್ನು ವಜಾಗೊಳಿಸುವಂತೆ ಆಗ್ರಹಿಸಿ ಸೈಯದ್ ಬುಡೇನ್ ಶಾ ಖಾದ್ರಿ ವಂಶಸ್ಥರ ಟ್ರಸ್ಟ್ ಶನಿವಾರ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಮುಜರಾಯಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದೆ.
ಸೈಯದ್ ಬುಡಾನ್ ಶಾ ಖಾದ್ರಿ ವಂಶಸ್ಥರ ಟ್ರಸ್ಟ್ ಅಧ್ಯಕ್ಷ ಸೈಯದ್ ಹಸೇನ್ ಶಾ ಖಾದ್ರಿ( ನಾಸಿರ್ ಪಾಶಾ) ಹಾಗೂ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ(ಅಜ್ಜತ್ ಪಾಶಾ) ಅವರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹಿಂದಿನ ಬಿಜೆಪಿ ಸರಕಾರ ಇನಾಂ ದತ್ತಾತ್ರೇಯ ಬಾಬಾ ಬುಡಾನ್ ದರ್ಗಾ ಸಂಬಂಧ ನೇಮಿಸಿರುವ ವ್ಯವಸ್ಥಾಪನ ಸಮಿತಿ ತಾರತಮ್ಯದಿಂದ ಕೂಡಿದ್ದು, ಒಂದು ಸಮುದಾಯವನ್ನು ಕಡೆಗಣಿಸಿ ಮತ್ತೊಂದು ಸಮುದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದ್ದರಿಂದ ಈ ಸಮಿತಿಯನ್ನು ವಜಾಗೊಳಿಸಿ ಪಾರದರ್ಶಕವಾದ ಹಾಗೂ ಎರಡೂ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ಇರುವ ಸಮಿತಿಯನ್ನು ನೇಮಕ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇನಾಂ ದತ್ತಾತ್ರೇಯ ಬಾಬಾ ಬುಡಾನ್ ದರ್ಗಾದಲ್ಲಿ ಕೈಗೊಳ್ಳಬೇಕಾದ ಪೂಜಾ ವಿಧಾನಗಳ ಮೇಲ್ವಿಚಾರಣೆಗಾಗಿ ಹಿಂದಿ ಬಿಜೆಪಿ ಸರಕಾರ 8 ಸದಸ್ಯರಿರುವ ವ್ಯವಸ್ಥಾಪನ ಸಮಿತಿಯನ್ನು ನೇಮಿಸಿದೆ. ಈ ಸಮಿತಿಯು ಒಂದು ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಮತ್ತೊಂದು ಸಮುದಾಯದ ಓರ್ವ ಸದಸ್ಯನನ್ನು ನೇಮಿಸಿ ತಾರತಮ್ಯ ಎಸಗಲಾಗಿದೆ. ಎರಡೂ ಸಮುದಾಯದವರಿಗೆ ಸ ಮಾ ನ ಪ್ರಾತಿನಿಧ್ಯ ನೀಡಬೇಕಿರುವುದಲ್ಲದೇ, ಇಬ್ಬರು ಮಹಿಳೆಯರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕಿತ್ತು. ಆದರೆ ಹಿಂದಿನ ಸರಕಾರದ ಅವಧಿಯಲ್ಲಿ ಸಮಿತಿ ಸದಸ್ಯರ ನೇಮಕಾತಿ ವೇಳೆ ಒಂದು ಸಮುದಾಯದವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದ ಒಂದು ಸಮುದಾಯಕ್ಕೆ ಅನ್ಯಾಯವಾಗಿದ್ದು, ಈ ಅನಧಿಕೃತ ಸಮಿತಿಯನ್ನು ವಜಾ ಮಾಡಬೇಕೆಂದು ಈ ಹಿಂದಿನಿಂದಲೂ ಆಗ್ರಹಿಸುತ್ತ ಬಂದಿದ್ದರೂ ಹಿಂದಿನ ಸರಕಾರ ಯಾವುದೇ ಕ್ರಮವಹಿಸಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಸಮಿತಿಯಿಂದ ಇತರ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಸಮಾನ ಪ್ರಾತಿನಿಧ್ಯ ಇಲ್ಲದ ವ್ಯವಸ್ಥಾಪನ ಸಮಿತಿಯನ್ನು ರದ್ದು ಮಾಡಿ, ಎರಡೂ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯ ಇರುವ ನೂತನ ಸಮಿತಿಯನ್ನು ರಚಿಸಬೇಕು.
ಇಲ್ಲವೇ ಸಜ್ಜಾದ್ ನಶೀನ್ ನೇತೃತ್ವದಲ್ಲಿ ಶಾಖಾದ್ರಿಗಳ ಸಮಿತಿಯನ್ನುರಚಿಸಬೇಕು. ಉರೂಸ್ ಸಂದರ್ಭ ನ್ಯಾಯಬದ್ಧವಾಗಿ ನಡೆದುಕೊಳ್ಳದ ಅಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು. ದರ್ಗಾದ ಪಕ್ಕದಲ್ಲಿ ಈ ಹಿಂದಿನಂತೆ ಮಸೀದಿಯನ್ನು ಮರುಸ್ಥಾಪಿಸಬೇಕು. ಗೋರಿಗಳ ಮೇಲೆ ಸೂಫಿ ಪಂಥದಂತೆ ಹಸಿರು ಹೊದಿಕೆ ಹಾಕಬೇಕು. ಎಲ್ಲ ರಸ್ತೆಗಳಲ್ಲಿನ ನಾಮಫಲಕಗಳಲ್ಲಿ ಬಾಬಾ ಬುಡನ್ ದರ್ಗಾ ಎಂಬ ಹೆಸರು ಹಾಕಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಮುಹಮ್ಮದ್ ಶರೀಫ್ ಶಾ ಖಾದ್ರಿ, ಅಹ್ಮದ್ ಆಲಿ ಶಾ ಖಾದ್ರಿ ಉಪಸ್ಥಿತರಿದ್ದರು.