ನಿಗಮ-ಮಂಡಳಿಗಳಿಗೆ 36 ಶಾಸಕರು, 39 ಕಾರ್ಯಕರ್ತರ ನೇಮಕ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-01-18 07:05 GMT

ಬೆಂಗಳೂರು: "ನಿಗಮ, ಮಂಡಳಿಗಳ ನೇಮಕ ಪಟ್ಟಿಯಲ್ಲಿ 36 ಶಾಸಕರು, 39 ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು  ಮಾಹಿತಿ ನೀಡಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಯಾವುದೇ ಕ್ಷಣದಲ್ಲಿ ನಿಗಮ, ಮಂಡಳಿಗಳ ನೇಮಕ ಪಟ್ಟಿ ಬಿಡುಗಡೆ ಆಗಲಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಅವರ ಹಕ್ಕಿನಂತೆ ಈ ಅಧಿಕಾರ ನೀಡಲಾಗುತ್ತಿದೆ." ಎಂದರು.

"ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ನಾಳೆ ಸಂಜೆ 4.30 ಕ್ಕೆ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆಸಲಾಗುವುದು. ಮೊದಲಿಗೆ ಮಧ್ಯಾಹ್ನ ಸಭೆ ಮಾಡಲು ಆಲೋಚನೆ ಮಾಡಿದ್ದೆವು. ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ಸಂಜೆ ನಡೆಸುತ್ತಿದ್ದೇವೆ" ಎಂದು ತಿಳಿಸಿದರು.

" ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಮೊದಲ ಸುತ್ತಿನ ಚರ್ಚೆ ನಡೆಯಲಿದೆ. ಈ ಸಭೆಗೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಆಹ್ವಾನಿಸಲಾಗಿದ್ದು, ಉಳಿದಂತೆ ಈ ಹಿಂದೆ ಚುನಾವಣಾ ಸಮಿತಿಯಲ್ಲಿದ್ದವರೇ ಇದ್ದಾರೆ. ಸಚಿವರು ಎಲ್ಲಾ ಕ್ಷೇತ್ರಗಳಿಗೆ ಹೋಗಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯಲಿದೆ" ಎಂದು ತಿಳಿಸಿದರು.

ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ:

ಜೆಡಿಎಸ್ ಎನ್ ಡಿಎ ಜತೆ ಮೈತ್ರಿಗೆ ಮುಂದಾಗಿರುವ ಬಗ್ಗೆ ಕೇಳಿದಾಗ, "ಅದು ಅವರ ಇಚ್ಛೆ. ನಾವು ಕೂಡ ಹಿಂದೆ ಅವರ ಜತೆಗೂಡಿದಾಗ ಹೆಚ್ಚಿನ ಕ್ಷೇತ್ರ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ ಅಂತಿಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡೋಣ. ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ" ಎಂದು ತಿಳಿಸಿದರು.

ಧರ್ಮದಲ್ಲಿ ರಾಜಕೀಯ ಇರಬಾರದು:

 "ಧರ್ಮ ನಮ್ಮ ವೈಯಕ್ತಿಕ ವಿಚಾರ. ನಾನು ಎಲ್ಲಾ ಧರ್ಮ, ಸಮುದಾಯಗಳ ಮೇಲೆ ನಂಬಿಕೆ ಇಟ್ಟಿದ್ದು, ನಮ್ಮ ಧರ್ಮದ ಆಚರಣೆ ಬಗ್ಗೆಯೂ ನಂಬಿಕೆ ಇದೆ. ರಾಮ ಮಂದಿರ ವಿಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಒಂದು ವಿಚಾರ ಸ್ಪಷ್ಟ ಪಡಿಸುತ್ತೇನೆ. ರಾಜಕೀಯದಲ್ಲಿ ಧರ್ಮ ಇರಬೇಕೇ ವಿನಃ ಧರ್ಮದಲ್ಲಿ ರಾಜಕೀಯ ಇರಬಾರದು" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News