ಶಿಷ್ಟಾಚಾರದ ಪ್ರಕಾರ ಗಣ್ಯರ ಸ್ವಾಗತಕ್ಕೆ ಮಾತ್ರ ಐಎಎಸ್ ಅಧಿಕಾರಿಗಳ ನೇಮಕ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು: ‘ಐಎಎಸ್ ಅಧಿಕಾರಿಗಳನ್ನು ಹಿರಿಯ ನಾಯಕರಿಗೆ ಶಿಷ್ಟಾಚಾರ ಪ್ರಕಾರ ನಿಯೋಜಿಸಲಾಗಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'ಇಂದು ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು' ಎಂದು ಹೇಳಿದ್ದಾರೆ.
''ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವ ಪಾತ್ರವೂ ಇಲ್ಲ. ಈ ರೀತಿಯ ಶಿಷ್ಟಾಚಾರದ ಪಾಲನೆ ಹಿಂದಿನ ಎಲ್ಲ ಸರ್ಕಾರದ ಕಾಲದಲ್ಲಿಯೂ ನಡೆದಿತ್ತು'' ಎಂದು ಅವರು ತಿಳಿಸಿದ್ದಾರೆ.
ವಿರೋಧ ಪಕ್ಷಗಳ ಮಹಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಹೊರ ರಾಜ್ಯಗಳಿಂದ ಬಂದ ರಾಜಕಾರಣಿಗಳ ಸೇವೆಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಕಳುಹಿಸಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.