ನಿಗಮ, ಮಂಡಳಿಗಳ ನೇಮಕಕ್ಕೆ ಪಟ್ಟಿ ಸಿದ್ಧ; ಮಹತ್ವದ ಸಭೆ ನಡೆಸಿದ ಸಿಎಂ, ಡಿಸಿಎಂ
ಬೆಂಗಳೂರು: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ ರಾತ್ರಿ (ಶುಕ್ರವಾರ) ಸಭೆ ನಡೆಸಿದ್ದಾರೆ.
ಈ ಕುರಿತು ಶನಿವಾರ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ʼನಿಗಮ ಮಂಡಳಿ ನೇಮಕ ಬಗ್ಗೆ ನಿನ್ನೆ ರಾತ್ರಿ ಒಂದು ಸುತ್ತು ಸಭೆ ನಡೆಸಿ ಚರ್ಚೆ ಮಾಡಿದ್ದೇವೆʼ ಎಂದು ತಿಳಿಸಿದರು.
ʼʼನಾನು ಮತ್ತು ಮುಖ್ಯಮಂತ್ರಿಗಳು ಸೇರಿ ಒಂದು ಸುತ್ತು ಮಾತುಕತೆ ನಡೆಸಿದ್ದೇವೆ. ಮೊದಲು ಯಾರು ಯಾರಿಗೆ ಕೊಡಬೇಕೆಂದು ನಾವು ಪಟ್ಟಿ ಮಾಡಿದ್ದೇವೆ. ಹಿರಿಯ ನಾಯಕರಿಗೆ ಅವಕಾಶ ಕೊಡಬೇಕಿದೆ. ನಮ್ಮ ಪಕ್ಷದ ರಾಜ್ಯ ಉಸ್ತುವಾರಿಗಳು ಈಗ ಮಧ್ಯ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿದ್ದು, ಅವರು ಕರ್ನಾಟಕಕ್ಕೆ ಬಂದಾಗ ಅವರ ಬಳಿ ಚರ್ಚೆ ನಡೆಸಿದ ಬಳಿಕ ನಿಗಮ ಮಂಡಳಿ ಪಟ್ಟಿ ಬಿಡುಗಡೆ ಮಾಡುತ್ತೇವೆʼʼ ಎಂದು ಅವರು ತಿಳಿಸಿದರು.
ʼʼಅನಗತ್ಯ ಹೇಳಿಕೆ ಕೊಟ್ಟರೆ ನೊಟೀಸ್ʼʼ
"ಪಕ್ಷದ ಶಾಸಕರು ಯಾರೇ ಆಗಲಿ ಪಕ್ಷದ ಆಂತರಿಕ ವಿಚಾರ, ಸರ್ಕಾರ ಹಾಗೂ ಅಧಿಕಾರದ ಬಗ್ಗೆ ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆ ನೀಡಬಾರದು ಎಂದು ಮನವಿ ಹಾಗೂ ಎಚ್ಚರಿಕೆ ನೀಡುತ್ತೇನೆ. ಇಷ್ಟರ ನಂತರವೂ ಹೇಳಿಕೆ ನೀಡಿದರೆ ವಿಧಿ ಇಲ್ಲದೆ ಅವರಿಗೆ ನೊಟೀಸ್ ನೀಡಬೇಕಾಗುತ್ತದೆ" ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.