30 ವರ್ಷ‌ ಹಳೆಯ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಬಂಧನ, ಬಿಜೆಪಿಯಿಂದ ತೀವ್ರ ಹೋರಾಟ: ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ

Update: 2024-01-01 12:51 GMT

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು  ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ಕಚೇರಿ ಪೂಜೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್ ಮತ್ತೆ ದ್ವೇಷದ ರಾಜಕಾರಣ ಆರಂಭಿಸಿದೆ. ಹಿಂದೆ ಸಿದ್ದರಾಮಯ್ಯ ಅವರ ಸರಕಾರದಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಐತಿಹಾಸಿಕ ಕ್ಷಣಕ್ಕೆ ಜನರು ಕಾಯುತ್ತಿದ್ದು, ಕಾಂಗ್ರೆಸ್ ಮಾತ್ರ ಇದನ್ನು ಭಯವೆಂಬಂತೆ ಬಿಂಬಿಸುತ್ತಿದೆ ಎಂದರು.

ಇದೇ ವೇಳೆ ಹುಬ್ಬಳ್ಳಿಯಿಂದ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡ ಇಬ್ಬರನ್ನು 30 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಜೈಲಿಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ಉದ್ಘಾಟನೆಯ ಆಚರಣೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿರುವ ಸಂದರ್ಭದಲ್ಲಿ ಇಂತಹ ಕ್ರಮವನ್ನು ಸರಕಾರ ಕೈಗೊಂಡಿದೆ. ನಾನು ಕೂಡ ಆಗ ಹೋರಾಟದಲ್ಲಿ ಭಾಗವಹಿಸಿದ್ದು, ನನ್ನನ್ನೂ ಬಂಧಿಸುತ್ತೀರಾ? ಅಷ್ಟು ಧೈರ್ಯ ಇದೆಯಾ? ಎಂದು ಪ್ರಶ್ನಿಸಿದರು.

ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಸ್ ಪಡೆಯಬೇಕು. ಹಳೆಯ ಪ್ರಕರಣ ಹೊರತೆಗೆದು ಬಂಧಿಸಲು ಪೊಲೀಸ್ ಇಲಾಖೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಬಿಜೆಪಿಯಿಂದ ಪ್ರತಿಭಟಿಸಲಾಗುವುದು‌ ಎಂದು ಎಚ್ಚರಿಕೆ ನೀಡಿದರು‌.

ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ನ ಶಾಸಕರೇ ಹೇಳಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಹೋದರೆ ಜನರು ಬಯ್ಯುತ್ತಿದ್ದಾರೆ. ಹೀಗಾಗಿ ಸರಕಾರದಲ್ಲಿ ಭಿನ್ನಾಭಿಪ್ರಾಯ, ಒಡಕು ಬಂದಿದೆ. ಮುಖ್ಯಮಂತ್ರಿಯವರ ಬದಲಾವಣೆಯೂ ಆಗಬಹುದು. ಡಿ.ಕೆ.ಶಿವಕುಮಾರ್ ಅವರೇ ಸಿಎಂ ಬದಲಾವಣೆಯ ಸುಳಿವು ನೀಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ದೊಡ್ಡ ಬದಲಾವಣೆಗಳನ್ನು ಜನರು ನಿರೀಕ್ಷೆ ಮಾಡಬಹುದು‌ ಎಂದರು‌.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News