ಈಡೇರದ ಆಶಾ ಕಾರ್ಯಕರ್ತೆಯರ ಬೇಡಿಕೆ, ನಾಲ್ಕನೆ ದಿನಕ್ಕೆ ಕಾಲಿಟ್ಟ ಧರಣಿ
ಬೆಂಗಳೂರು : ಮಾಸಿಕ 15 ಸಾವಿರ ರೂ.ನಿಶ್ಚಿತ ಗೌರವಧನ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಬುಧವಾರ ರಾತ್ರಿಯೂ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‍ನ ಖಾಲಿ ಜಾಗ ಸೇರಿ ರಸ್ತೆಯಲ್ಲೇ ಮಲಗಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ.
ಗುರುವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯ ಪದಾಧಿಕಾರಿಗಳೊಂದಿಗೆ ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ್ ನೇತೃತ್ವದಲ್ಲಿ ನಗರದ ಆರೋಗ್ಯ ಸೌಧದಲ್ಲಿ ಮಾತುಕತೆಯನ್ನು ನಡೆಸಿದ್ದರೂ, ವಿಫಲವಾಗಿದೆ. ಸಂಘದ ವತಿಯಿಂದ ನೀಡಲಾದ ಬೇಡಿಕೆಗಳ ಕುರಿತು ಸಚಿವರೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸಿ ಮನವರಿಕೆ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸಂಘವು ಹೇಳಿದೆ. ಮಾತುಕತೆಗಳು ನಡೆಯುತ್ತಿರುವುದರಿಂದ, ಧರಣಿಯು ನಾಲ್ಕನೆ ದಿನವೂ ಮುಂದುವರೆಯಲಿದೆ. ಬೇಡಿಕೆ ಈಡೇರುವವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಸಂಘವು ಸ್ಪಷ್ಟಪಡಿಸಿದೆ.
ಮೂರು ದಿನಗಳಿಂದ ನಿರಂತರವಾಗಿ ಆಶಾ ಕಾರ್ಯಕರ್ತೆಯರು ಮುಷ್ಕರವನ್ನು ನಡೆಸುತ್ತಿದ್ದು, ಮುಷ್ಕರದಲ್ಲಿ ಭಾಗಿಯಾಗಿದ್ದ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಪ್ರಭಾವತಿ ಆಶಾ ಕಾರ್ಯಕರ್ತೆ ಗುರುವಾರದಂದು ರಕ್ತದೊತ್ತಡದಿಂದ ಕುಸಿದು ಬಿದ್ದರು. ಈ ನಡುವೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಅವರ ಆರೋಗ್ಯ ಯಥಾಸ್ಥಿತಿಗೆ ಬಂದಿತು.