ಕಾಂಗ್ರೆಸ್‍ಗೆ ಅಡಿಪಾಯವೇ ದಲಿತರು, ಸಭೆಗೆ ಯಾರೂ ಅಡ್ಡಿಯಿಲ್ಲ: ಎಚ್.ಸಿ. ಮಹದೇವಪ್ಪ

Update: 2025-01-09 16:09 GMT

ಬೆಂಗಳೂರು : ‘ದಲಿತ ಸಮುದಾಯದ ಸಮಸ್ಯೆಗಳ ಕುರಿತಾದ ಚರ್ಚೆಗಳನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಲ್ಲಿಸುವುದಕ್ಕೂ ಆಗುವುದಿಲ್ಲ, ನಿಲ್ಲಿಸಿದರೆ ಕೇಳುವುದೂ ಇಲ್ಲ. ಕಾಂಗ್ರೆಸ್‍ಗೆ ಅಡಿಪಾಯವೇ ದಲಿತರು, ಹಾಗಿದ್ದಾಗ ಯಾರೂ ಅಡ್ಡಿ ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆದಿದ್ದ ದಲಿತ ನಾಯಕರ ಔತಣ ಕೂಟ ಸಭೆ ಮುಂದೂಡಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಔತಣ ಕೂಟ ಸಭೆ ರದ್ದಾಗಿಲ್ಲ, ಮುಂದೆ ಹಾಕಿದ್ದೇವೆ ಅಷ್ಟೇ. ಚಿತ್ರದುರ್ಗದಲ್ಲಿ ದಲಿತ ಸಮಾವೇಶ ಮಾಡಿದ್ದರಿಂದಲೇ ನಮಗೆ 135-136 ಸ್ಥಾನ ಬರುವುದಕ್ಕೆ ಸಾಧ್ಯವಾಯಿತು. ದಲಿತರೇ ಕಾಂಗ್ರೆಸ್‍ನ ಅಡಿಪಾಯ ಆಗಿರುವಾಗ ಹೈಕಮಾಂಡ್ ಸಭೆ ಮಾಡಬೇಡಿ ಎಂಬುದಾಗಿ ಹೇಳಲು ಸಾಧ್ಯವಿಲ್ಲ ಎಂದರು.

ದಲಿತರ ಸಮಸ್ಯೆ ನಿರಂತರ ಚರ್ಚೆ ಆಗಬೇಕು. ಇಂದೂ ಚರ್ಚೆ ಮಾಡುತ್ತೇವೆ ಮುಂದೆಯೂ ಚರ್ಚೆ ಮಾಡುತ್ತೇವೆ. ಸುರ್ಜೆವಾಲಾ ಅವರು ಸಭೆ ಮಾಡಬೇಡಿ ಎಂದಿಲ್ಲ. ರಾಜ್ಯದ ಪ್ರಸ್ತುತ ಬೆಳವಣಿಗೆಯನ್ನು ಗಮನಿಸಿ ಸಭೆ ಮುಂದೂಡಿ ಎಂದಿದ್ದಾರೆ ಅಷ್ಟೇ. ದಲಿತ ಸಮುದಾಯದ ಚರ್ಚೆ ಮಾಡುವುದಕ್ಕೆ ಎಲ್ಲರೂ ಸ್ವತಂತ್ರರು ಎಂದು ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

ಹಸ್ತದ ಗುರುತು ಎಲ್ಲರಿಗೂ ಗೊತ್ತು, ಪಕ್ಷದಲ್ಲಿ ಕಾಣದ ಕೈ ಯಾವುದೂ ಇಲ್ಲ. ಇದರಲ್ಲಿ ರಾಜಕೀಯ ಹುಡುಕುವುದೇನಿಲ್ಲ. ಒಳ್ಳೆಯ ಉದ್ದೇಶದಿಂದಲೇ ಸಭೆ ಸೇರುವ ನಿರ್ಧಾರವಾಗಿತ್ತು. ನನ್ನ ಪ್ರಕಾರ ಗೊಂದಲವಿಲ್ಲ, ನಾವೆಲ್ಲ ಬಹಳ ಸ್ಪಷ್ಟವಾಗಿದ್ದೇವೆ. ಕಾಂಗ್ರೆಸ್ ಸರಕಾರ ದಲಿತರು, ಹಿಂದುಳಿದವರ ಪರವಾಗಿದೆ. ಇದರಲ್ಲಿ ತಪ್ಪು ಹುಡುಕುವುದೇನೂ ಇಲ್ಲ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News