ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆಗೆ ಖಂಡನೆ : ಮೂರು ಜಿಲ್ಲೆಗಳ ಬಂದ್ ಯಶಸ್ವಿ
ಬೆಂಗಳೂರು : ‘ಡಾ.ಬಿ.ಆರ್.ಅಂಬೇಡ್ಕರ್ ಎನ್ನುವುದು ಕೆಲವರಿಗೆ ಫ್ಯಾಶನ್ ಆಗಿದ್ದು, ಅಂಬೇಡ್ಕರ್ ಬದಲು ದೇವರ ಹೆಸರು ಹೇಳಿದರೆ ಸ್ವರ್ಗ ಸಿಗುತ್ತಿತ್ತು’ ಎಂದು ವಿವಾದಿತ ಮಾತುಗಳನ್ನಾಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಿ, ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ದಲಿತ ಪರ ಸಂಘಟನೆಗಳು ಕರೆ ನೀಡಿದ್ದ ಹುಬ್ಬಳ್ಳಿ-ಧಾರವಾಡ, ವಿಜಯನಗರ ಹಾಗೂ ಬೀದರ್ ಜಿಲ್ಲೆಗಳ ಬಂದ್ ಭಾಗಶಃ ಯಶಸ್ವಿ ಆಗಿದೆ.
ಗುರುವಾರ ಮುಂಜಾನೆ ಹುಬ್ಬಳ್ಳಿ-ಧಾರವಾಡ ಬಂದ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಂಗಡಿ, ಹೋಟೆಲ್‍ಗಳು ಬಂದ್ ಆಗಿದ್ದವು. ಔಷಧ ಅಂಗಡಿಗಳು ಮಾತ್ರ ತೆರದಿದ್ದು, ಹಾಲಿನ ವಾಹನ, ಆಂಬುಲೆನ್ಸ್ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಪ್ರತಿಭಟನಕಾರರು ವಾಹನಗಳನ್ನು ಅಡ್ಡಗಟ್ಟುತ್ತಿದ್ದು, ಯಾವುದೇ ಬಸ್‌ಗಳು ಸಂಚರಿಸಲಿಲ್ಲ. ಪ್ರಮುಖವಾಗಿ ಚನ್ನಮ್ಮ ವೃತ್ತದಲ್ಲಿ ವಾಹನಗಳ ಸಂಚಾರ ವಿರಳವಾಗಿದ್ದರೆ, ಬಂದ್ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಮಾಹಿತಿ ಇಲ್ಲದೆ, ಹೊರಬಂದಿದ್ದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದಕ್ಕೆ ಪರದಾಡುವಂತಾಗಿದೆ.
ಇನ್ನೊಂದೆಡೆ, ಧಾರವಾಡದ ಜುಬಿಲಿ ವೃತ್ತದಲ್ಲಿ ಜಮಾಯಿಸಿದ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಜೈ ಭೀಮ್ ಘೋಷಣೆ ಕೂಗಿದರು. ಹಳೆ ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ,ನ್ಯೂ ಇಂಗ್ಲಿಷ್ ಶಾಲೆ, ಇಂಡಿ ಪಂಪ್, ಬಂಕಾಪುರ ಚೌಕ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ, ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಕರೆ ನೀಡಿರುವ ವಿಜಯನಗರ ಜಿಲ್ಲಾ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಬೀದರ್ ನಲ್ಲೂ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟಿತು.
ಹೊಸಪೇಟೆಯಲ್ಲಿ ಬಂದ್ ಬಹುತೇಕ ಯಶಸ್ವಿಯಾದರೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿಗಳಲ್ಲಿ ಭಾಗಶಃ ಯಶಸ್ವಿಯಾಯಿತು. ಆದರೆ ಹರಪನಹಳ್ಳಿ, ಹೂವಿನ ಹಡಗಲಿ ಮತ್ತು ಕೊಟ್ಟೂರು ತಾಲ್ಲೂಕುಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೀದರ್‌ನಲ್ಲೂ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್‍ಗಳು ಮುಚ್ಚಿದ್ದವು. ಬಸ್ ಸಂಚಾರ ಇರಲಿಲ್ಲ. ಆಟೊ ಸಂಚಾರ ಬೆಳಿಗ್ಗೆ 10 ಗಂಟೆಯ ಬಳಿಕ ತೀರಾ ವಿರಳವಾಯಿತು. ಟ್ಯಾಕ್ಸಿಗಳು ಸಹ ರಸ್ತೆಗೆ ಇಳಿಯಲಿಲ್ಲ. ತರಕಾರಿ ಮಾರುಕಟ್ಟೆಯಲ್ಲಿ ಶೇ.40ರಷ್ಟು ಅಂಗಡಿಗಳು ತೆರೆದಿದ್ದವು. ಆದರೆ ಕೊಳ್ಳುವ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಕಂಡುಬಂದಿತು.
ಸರಕಾರಿ ಕಚೇರಿಗಳು, ಬ್ಯಾಂಕ್‍ಗಳು ಬಾಗಿಲು ತೆರೆದಿದ್ದವು. ಆದರೆ ಸಾರ್ವಜನಿಕರ ಸಂಖ್ಯೆ ಕಡಿಮೆ ಕಂಡುಬಂದಿತು. ಇನ್ನೂ, ಜಿಲ್ಲೆಯ ಮಟ್ಟಿಗೆ ಹೊಸಪೇಟೆಯಲ್ಲೇ ಉತ್ತಮ ರೀತಿಯಲ್ಲಿ ಪ್ರತಿಭಟನೆ ಮೆರವಣಿಗೆ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಸಭೆ ನಡೆಯಿತು. ಅದೇ ರೀತಿ, ಬೀದರ್ ನಲ್ಲೂ ಮೆರವಣಿಗೆ ಕಂಡಿತು.
ಹೊಸಪೇಟೆಯಲ್ಲಿ ಹಿರಿಯ ಲೇಖಕ, ಚಿಂತಕ ಡಾ.ರಹಮತ್ ತರೀಕೆರೆ, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ಮೊದಲಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆಯಾ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಲೋಕಸಭಾ ಸ್ಪೀಕರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಅಮಿತ್ ಶಾ ಅವರನ್ನು ಈ ಕೂಡಲೇ ಗೃಹ ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಆಗ್ರಹಿಸಿದರು.