ಕೆಪಿಎಸ್ಸಿ ಪರೀಕ್ಷೆ ವಿಷಯದಲ್ಲಿ ಸರಕಾರವು ಯುವಜನರ ಜೊತೆ ಏಕೆ ಆಟ ಆಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

Update: 2025-01-09 13:45 GMT

ಛಲವಾದಿ ನಾರಾಯಣಸ್ವಾಮಿ 

ಬೆಂಗಳೂರು : ಕೆಪಿಎಸ್ಸಿ ಪರೀಕ್ಷೆ ವಿಷಯದಲ್ಲಿ ಸರಕಾರವು ಯುವಜನರ ಜೊತೆ ಏಕೆ ಆಟ ಆಡುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಗುರುವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭವಿಷ್ಯ ಕಂಡುಕೊಳ್ಳಲು ಹಲವು ಯುವಕರು ಕೆಪಿಎಸ್ಸಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಬಾರಿ ಪ್ರಿಲಿಮಿನರಿ ಪರೀಕ್ಷೆ ನಡೆದಾಗ 200 ಪ್ರಶ್ನೆಗಳಲ್ಲಿ 57 ಪ್ರಶ್ನೆಗಳು ಕನ್ನಡದಲ್ಲಿ ತಪ್ಪಾಗಿ ಮುದ್ರಣ ಆಗಿತ್ತು. ಅದರಿಂದ ಜನರಿಗೆ ಅನ್ಯಾಯ ಆಗಿದ್ದು, ಹೋರಾಟವೂ ನಡೆದಿತ್ತು ಎಂದರು.

ಈಗ ಕಳೆದ ವಾರ ಮತ್ತೆ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ 200 ಪ್ರಶ್ನೆಗಳ ಪೈಕಿ 33 ಪ್ರಶ್ನೆಗಳು ತಪ್ಪಾಗಿ ಮುದ್ರಣಗೊಂಡಿವೆ. ಆಂಗ್ಲ ಭಾಷೆಯ ಪ್ರಶ್ನೆಗಳು ಕನ್ನಡದಲ್ಲಿ ಅರ್ಥವೇ ಆಗದಂತಿದ್ದು, ಪ್ರಶ್ನೆಯ ರೀತಿಯಲ್ಲಿ ಇರಲಿಲ್ಲ. ಈ ಸರಕಾರಕ್ಕೆ ಕನ್ನಡವೂ ಬರುವುದಿಲ್ಲ, ಇದು ಮುಖ್ಯಮಂತ್ರಿ ಪರಿಧಿಯಲ್ಲಿ ಬರುವ ವಿಷಯ. ಇದರ ಬಗ್ಗೆ ಮುಖ್ಯಮಂತ್ರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ಇಂಗ್ಲಿಷ್‍ನಲ್ಲಿದ್ದ ಪ್ರಶ್ನೆಯನ್ನು ಗೂಗಲ್ ಮೂಲಕ ಭಾಷಾಂತರ ಮಾಡುತ್ತಾರೆ. ಇವರಿಗೆ ಕನ್ನಡ ಬರುವುದಿಲ್ಲ. ಕೆಪಿಎಸ್ಸಿಗೆ ನೇಮಿಸಿದ ಅಧಿಕಾರಿ ಕರ್ನಾಟಕದವರಲ್ಲ, ಅವರಿಗೆ ಕನ್ನಡ ಬರುವುದಿಲ್ಲ, ಮತ್ತೆ ಪ್ರಶ್ನೆಪತ್ರಿಕೆ ತಯಾರಿಸುವವರು ಯಾರು?. ಪ್ರಶ್ನೆಪತ್ರಿಕೆಯನ್ನು ಪರಿಶೀಲನೆಗೆ ಕೊಟ್ಟರೆ ಪೇಪರ್ ಬಹಿರಂಗ ಆಗುವುದನ್ನು ಗಮನಿಸಿದ್ದೇವೆ ಎಂದು ಅವರು ಟೀಕಿಸಿದರು.

ಒಂದೇ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೆ ಸಾವಿರಾರು ನಂಬರ್ ಹಿಂದಕ್ಕೆ ಹೋಗುತ್ತಾರೆ. ಇದರ ಗಂಭೀರತೆ ಸರಕಾರಕ್ಕೆ ಯಾಕೆ ಅರ್ಥ ಆಗಿಲ್ಲ. 33 ಪ್ರಶ್ನೆಗೆ ಉತ್ತರಿಸಲಾಗದೆ ಇದ್ದರೆ ಉತ್ತೀರ್ಣರಾಗುವುದು ಹೇಗೆ?. ಪರೀಕ್ಷಾರ್ಥಿಗಳು ಬೀದಿಗೆ ಇಳಿಯುವಂತಾಗಿದೆ. ವಯೋಮಿತಿ ಮೀರಿದರೆ ಕೆಲಸವೂ ಸಿಗುವುದಿಲ್ಲ. ಇಂಗ್ಲಿಷ್‌-ಕನ್ನಡದ ಪ್ರಶ್ನೆಗಳ ಅರ್ಥ ಬೇರೆ ಬೇರೆ ಎಂದು ಆಕ್ಷೇಪ ಹೊರಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News