ರಾಜಕೀಯ ಕಾರಣಗಳಿಂದ ʼಮೇಕೆದಾಟುʼವಿಗೆ ಅನುಮತಿ ವಿಳಂಬ : ಡಿ.ಕೆ.ಶಿವಕುಮಾರ್

Update: 2025-01-09 16:01 GMT

ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನವಿದೆ. ಇದರ ಕುರಿತು ನ್ಯಾಯಲಯದಲ್ಲಿ ನಮ್ಮ ಹೋರಾಟ ನಡೆಯುತ್ತಿದೆ. ಒಂದಷ್ಟು ರಾಜಕೀಯ ಕಾರಣಗಳಿಗಾಗಿ ಅನುಮತಿ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯ ಸಿಗುವ ಭರವಸೆಯಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ತಮಿಳುನಾಡಿನ ಕಾಂಚಿಪುರಂ ವರದಾರಾಜು ಪೆರುಮಾಳ್ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘400 ಟಿಎಂಸಿಗೂ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿದರೆ ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಜೊತೆಗೆ, ಪೆನ್ನಾರ್ ನದಿ ನೀರಿನ ವಿಚಾರವಾಗಿ ನಿಮ್ಮ, ನಿಮ್ಮಲ್ಲಿಯೇ ಸಮಸ್ಯೆ ಇತ್ಯರ್ಥ ಪಡಿಸಿಕೊಂಡು ಬನ್ನಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಜಲಶಕ್ತಿ ಸಚಿವರು ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ನಕ್ಸಲ್ ಮುಕ್ತ ರಾಜ್ಯ: ನಮ್ಮ ಸರಕಾರ ನಕ್ಸಲ್ ಹೋರಾಟಗಾರರ ಜೊತೆ ಶಾಂತಿಯುತ ಮಾತುಕತೆ ನಡೆಸಿದ ಪರಿಣಾಮ ಆರು ಮಂದಿ ಶರಣಾಗಿದ್ದಾರೆ. ಇದರಲ್ಲಿ ಒಬ್ಬ ಸದಸ್ಯರು ತಮಿಳುನಾಡು ಮೂಲದವರು. ಬಿ.ಟೆಕ್ ಪದವಿ ಪಡೆದಿದ್ದಾರೆ ಎಂದು ಅವರು ಹೇಳಿದರು.

ಒಂದು ದೇಶ ಒಂದು ಚುನಾವಣೆ ಮೂಲಕ ಕೇಂದ್ರ ಬಿಜೆಪಿ ಸರಕಾರ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ಬಲವಾಗಿ ಖಂಡಿಸುತ್ತದೆ. ಇದು ಬಿಜೆಪಿಯ ರಾಜಕೀಯ ಕುತಂತ್ರ. ನಾವು ಈಗ ಇರುವ ಚುನಾವಣಾ ವ್ಯವಸ್ಥೆಯ ಪರವಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News