‘ಅಚ್ಚೇದಿನ್’ಗೆ ಮತ್ತೆ ಸಮಯ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್

Update: 2024-04-21 17:51 GMT

ಬೆಂಗಳೂರು: ಹತ್ತು ವರ್ಷಗಳಲ್ಲಿ ಅಚ್ಚೇ ದಿನಗಳನ್ನು ತರದೇ ಈಗ 2047ರವರೆಗೆ ಸಮಯ ಕೇಳುತ್ತಿರುವ ಮೋದಿಯವರಿಗೆ ಯಾವ ನೈತಿಕತೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಮೊದಲು 5 ವರ್ಷ ಕೇಳಿದ್ದರು. ಆದರೆ, ಅವರು ಅಧಿಕಾರಕ್ಕೇರಿ 10 ವರ್ಷಗಳೇ ಕಳೆದಿವೆ. ಈಗ ಮತ್ತೆ 23 ವರ್ಷ ಸಮಯ ಕೇಳ್ತಿದ್ದಾರೆ. ಅಂದರೆ 10 ವರ್ಷಗಳಲ್ಲಿ ಜನರ ಬದುಕಿನಲ್ಲಿ ಅಚ್ಚೇ ದಿನಗಳು ಬರಲಿಲ್ಲ ಎಂಬುದನ್ನು ಮೋದಿಯವರೇ ಒಪ್ಪಿಕೊಂಡಂತಾಗಿದೆ ಎಂದರು.

ಮೊದಲು 10 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಜನರ ಮುಂದಿಟ್ಟು ಮೋದಿಯವರು ಮತ ಕೇಳಲಿ. ದೇಶದ ಬಡವರಿಗೆ ಇವರು ಒಂದು ರೂಪಾಯಿ ಕೂಡ ಹೆಚ್ಚಿಗೆ ಕೊಟ್ಟಿಲ್ಲ. ಕರ್ನಾಟಕ ರಾಜ್ಯವನ್ನಂತೂ ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರಕಾರ ಮಾಡಿರುವ ಅನ್ಯಾಯಗಳ ನೈಜ ಪ್ರಶ್ನೆಗಳಿಗೆ ಒಂದಕ್ಕೂ ಮೋದಿಯವರು ಉತ್ತರ ಕೊಟ್ಟಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಆಯುಷ್ಮಾನ್ ಭಾರತ್ ಯೋಜನೆ ಬಗ್ಗೆ ಮೋದಿಯವರು ಮಾತನಾಡುತ್ತಾರೆ. ನೈಜವಾಗಿ ಇದು ಆರೋಗ್ಯ ಕರ್ನಾಟಕ ಯೋಜನೆ. ಅದನ್ನೇ ಅವರು ಆಯುಷ್ಮಾನ್ ಭಾರತ್ ಎಂದು ನಾಮಕರಣ ಮಾಡಿಕೊಂಡರು. ವಾಸ್ತವವಾಗಿ ನೋಡಿದರೆ ಆಯುಷ್ಮಾನ್ ಭಾರತ್ ಯೋಜನೆಗೆ ಶೇ.70ರಷ್ಟು ಹಣ ಕೊಡುತ್ತಿರುವುದು ಕರ್ನಾಟಕ ಸರಕಾರ. ಕೇಂದ್ರದಿಂದ ಬರುತ್ತಿರುವುದು ಕೇವಲ 30ರಷ್ಟು ಮಾತ್ರ. ಇಲ್ಲಿಯವರೆಗೆ ಆಯುಷ್ಮಾನ್ ಭಾರತ್ ಯೋಜನೆಯಡಿ 1920 ಕೋಟಿ ಮಾತ್ರ ಕೇಂದ್ರದಿಂದ ಬಂದಿದೆ. ಆದರೆ, 4790 ಕೋಟಿ ರೂ. ಹಣವನ್ನು ರಾಜ್ಯ ಸರಕಾರವೇ ಭರಿಸಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಮೋದಿಯವರು ಹೇಳಿಕೊಳುತ್ತಿದ್ದಾರೆ. ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದ್ಧು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ. ಅದಕ್ಕೆ ಅಡಿಪಾಯ ಹಾಕಿದ್ದೇ ಕಾಂಗ್ರೆಸ್ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕ್ಯಾಶ್‍ಲೆಸ್ ಮಾಡಲು ರೂಪಾಯಿ ಅಪಮೌಲ್ಯ ಮಾಡಿದ್ದೇನೆ ಎಂದು ಮೋದಿಯವರು ಹೇಳಿಕೊಂಡರು. ರೂಪಾಯಿ ಅಪಮೌಲ್ಯದಿಂದ ಕ್ಯಾಶ್ ವಹಿವಾಟನ್ನು ಕಡಿಮೆ ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದು ಬಹಿರಂಗವಾಗಿ ಮೋದಿಯವರು ಮಾತಾಡಿದ್ದರು. ಆದರೆ ವಿಪರ್ಯಾಸ ಮೊದಲು 15 ಲಕ್ಷ ಕೋಟಿಯಷ್ಟಿದ್ದ ಕ್ಯಾಶ್ ವ್ಯವಹಾರ ಇಂದು 35 ಲಕ್ಷ ಕೋಟಿಯಷ್ಟು ಕ್ಯಾಶ್ ದೇಶದಲ್ಲಿ ಹರಿದಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕರ್ನಾಟಕದಿಂದ ಹೆಚ್ಚು ಲಾಭ ಪಡೆಯುವ ಕೇಂದ್ರ ಸರಕಾರ ಕರ್ನಾಟಕಕ್ಕೆ ಕೊಟ್ಟಿದ್ದೇನು. ಮನೆಕಟ್ಟಲು ಕೊಡುವ ಹಣದಲ್ಲೂ ಶೇ.18ರಷ್ಟು ಜಿಎಸ್‍ಟಿ ಪಡೆಯುತ್ತಾರೆ. ಬೆಂಗಳೂರಿನ ನೀರಿನ ಬವಣೆ ಬಗ್ಗೆ ಮಾತನಾಡುತ್ತಾರೆ. ಐಟಿ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಎಂದು ಮೋದಿಯವರು ಹೇಳಿ ಹೋಗಿದ್ದಾರೆ. ಹಾಗೆ ಹೇಳಲು ಇವರಿಗೆ ಯಾವ ಅರ್ಹತೆ ಇದೆ. ಬೆಂಗಳೂರನ್ನು ಐಟಿ ಸಿಟಿಯನ್ನಾಗಿ ಮೋದಿಯವರು ಮಾಡಿದ್ದರಾ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಬರ ಇರುವ ಸಂದರ್ಭದಲ್ಲಿ ರಾಜ್ಯ ಸರಕಾರ ಬರ ಪರಿಸ್ಥಿತಿಯನ್ನು ನಿರ್ವಹಿಸುತ್ತಿದೆ. ಬೆಂಗಳೂರಿನ ನೀರಿನ ಮೂಲಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರಕಾರ ಒಂದು ರೂಪಾಯಿ ಕೊಡಲಿಲ್ಲ. ಬೆಂಗಳೂರಿನಿಂದ ಹೆಚ್ಚು ತೆರಿಗೆ ಪಡೆದು ಈಗ ಬೆಂಗಳೂರನ್ನು ಟೀಕಿಸುತ್ತಿದ್ದಾರೆ. ಒಬ್ಬ ಪ್ರಧಾನಿಯವರು ಹೀಗೆ ಮಾತಾಡುವುದು ಸರಿಯಲ್ಲ. ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದಲ್ಲಿ ಬಿಜೆಪಿ 200 ಸ್ಥಾನ ಗಳಿಸುವುದು ಕಷ್ಟ ಎಂದು ದಿನೇಶ್ ಗುಂಡೂರಾವ್ ತಿಳಿಸಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News