ವಿಧಾನಮಂಡಲ ಅಧಿವೇಶನ ಒಂದು ದಿನ ವಿಸ್ತರಣೆ

Update: 2024-02-23 17:15 GMT

ಬೆಂಗಳೂರು : ಕೇಂದ್ರ ಸರಕಾರದ ವಿರುದ್ಧ ನಿರ್ಣಯ ಅಂಗೀಕರಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ, ಗದ್ದಲ ಮುಂದುವರಿಸಿದ ಹಿನ್ನೆಲೆ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ(ಫೆ.26) ಮುಂದೂಡಲಾಯಿತು.

ಶುಕ್ರವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಹತ್ತು ನಿಮಿಷ ಕಲಾಪ ಮುಂದೂಡಿದ ಸ್ಪೀಕರ್ ಯು.ಟಿ. ಖಾದರ್, ‘ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಆದರೆ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಂಧಾನ ಯತ್ನ ವಿಫಲವಾಯಿತು.

ಈ ಹಂತದಲ್ಲಿ ಪುನಃ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿ ಕೇಂದ್ರ ಸರಕಾರದ ವಿರುದ್ಧದ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಘೋಷಣೆಗಳನ್ನು ಮೊಳಗಿಸಿದರು.

ಕೇಂದ್ರ ಸರಕಾರದ ವಿರುದ್ಧ ರಾಜಕೀಯ ಪ್ರೇರಿತ ನಿರ್ಣಯ ಮಂಡಿಸುವ ಮೂಲಕ ಮತೊಮ್ಮೆ ಸದನದ ಪಾವಿತ್ರ್ಯತೆಗೆ ಅಪಚಾರ ಮಾಡಲಾಗಿದೆ. ಕೇಂದ್ರ ಸರಕಾರವನ್ನು ಬೆಂಬಲಿಸಿ ಪ್ರತಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮನವಿ ಮಾಡಿದಾಗ, ಸ್ಪೀಕರ್ ಖಾದರ್ ಒಪ್ಪಲಿಲ್ಲ. ಗದ್ದಲದ ಮಧ್ಯೆಯೇ ತಾವು ತಂದಿದ್ದ ನಿರ್ಣಯದ ಕರಡನ್ನು ಅಶೋಕ್ ಓದಿದರು.

ಸಮರ್ಥನೆ: ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಧ್ಯಪ್ರವೇಶಿಸಿ ಮಾತನಾಡಿ, ‘ಕರ್ನಾಟಕ ರಾಜ್ಯದ ಹಿತ ರಕ್ಷಣೆ ಮಾಡುವ ಅಂಶಗಳು ನಿರ್ಣಯದಲ್ಲಿವೆ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯವನ್ನಷ್ಟೇ ಹೇಳಿದ್ದೇವೆ. ಇದರಲ್ಲಿ ಯಾವುದೇ ಮುಚ್ಚು-ಮರೆಯಿಲ್ಲ. ಸದನದ ಒಕ್ಕೊರಲ ಧ್ವನಿ ಹಾಗೂ ನಾಡಿನ ಏಳು ಕೋಟಿ ಜನರ ಧ್ವನಿ ಇದರಲ್ಲಿ ಅಡಗಿದೆ’ ಎಂದು ನಿರ್ಣಯ ಅಂಗೀಕಾರವನ್ನು ಸಮರ್ಥಿಸಿಕೊಂಡರು.

ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದರಲ್ಲದೇ, ಧರಣಿ ನಡೆಸುತ್ತಿರುವ ಅವರ ಧೋರಣೆಯನ್ನು ಖಂಡಿಸಿದರು. ಜೊತೆಗೆ ನಿರ್ಣಯ ಮಂಡಿಸಲು ನಿಮ್ಮ ಪರವಾನಗಿ ತೆಗೆದುಕೊಳ್ಳಬೇಕಿಲ್ಲ ಎಂದು ತಿರುಗೇಟು ನೀಡಿದರು. ಕಾಯ್ದೆ, ಕಾನೂನು ಮತ್ತು ನಿಯಮಾವಳಿ ಪ್ರಕಾರವೇ ನಿರ್ಣಯ ಮಂಡಿಸಿದ್ದೇವೆ. ಕರ್ನಾಟಕದ ಹಿತರಕ್ಷಣೆಯ ಅಂಶಗಳು ನಿರ್ಣಯದಲ್ಲಿವೆ. ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಂಕಿ- ಅಂಶಗಳ ಸಹಿತ ಮಂಡನೆ ಮಾಡಿ ಅನುಮೋದನೆ ಪಡೆದಿದ್ದೇವೆ. ನಿಮಗೆ ರಾಜಕೀಯಬೇಕೋ? ಜನ ಹಿತರಕ್ಷಣೆ ಬೇಕೋ ಎಂಬದನ್ನು ನೀವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪಾಟೀಲ್ ಹೇಳಿದರು.

ಒಂದು ದಿನ ವಿಸ್ತರಣೆ: ಶುಕ್ರವಾರ (ಫೆ.23) ಮುಕ್ತಾಯವಾಗಬೇಕಿದ್ದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಸೋಮವಾರ(ಫೆ.26)ದವರೆಗೆ ವಿಸ್ತರಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು.

ಸ್ಪೀಕರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ವಿಧಾನಸಭಾ ಕಲಾಪ ಸಲಹಾ ಸಮಿತಿ(ಬಿಎಸ್‍ಸಿ) ಸಭೆಯಲ್ಲಿ ಅಧಿವೇಶನ ಕಲಾಪವನ್ನು ಒಂದು ದಿನ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಯಿತು. ಅದನ್ನು ಸದನದಲ್ಲಿ ಪ್ರಕಟಿಸಿದರು.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಶುಕ್ರವಾರ ಉತ್ತರಿಸಬೇಕಿತ್ತು. ನಂತರ ಬಜೆಟ್‍ಗೆ ಸದನದ ಲೇಖಾನುದಾನ ಪಡೆಯಬೇಕಿತ್ತು. ಬಳಿಕ ಅಧಿವೇಶನ ಮುಕ್ತಾಯವಾಗುತ್ತಿತ್ತು. ಮುಖ್ಯಮಂತ್ರಿಯವರು ಶುಕ್ರವಾರ ಉತ್ತರ ನೀಡಿಲ್ಲ. ಹೀಗಾಗಿ, ಒಂದು ದಿನ ಕಲಾಪವನ್ನು ವಿಸ್ತರಣೆ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News