ವಿಧಾನಸೌಧದ ಬಳಿ ಡ್ರೋನ್ ಹಾರಿಸಲು ಯತ್ನ: ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರು, ಜು.29: ವಿಧಾನಸೌಧದ ಪೂರ್ವ ದ್ವಾರದ ಬಳಿ ಡ್ರೋನ್ ಹಾರಿಸಲು ಯತ್ನಿಸಿದ ಘಟನೆ ಜು.28ರ ಬೆಳಗ್ಗೆ ನಡೆದಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅಂಬೇಡ್ಕರ್ ಪ್ರತಿಮೆ ಬಳಿ ಶುಕ್ರವಾರ (ಜು.28) ಬೆಳಗ್ಗೆ 6:45ರ ಸುಮಾರಿಗೆ ಡ್ರೋನ್ ಹಾರಿಸಲು ಯತ್ನಿಸಿದ ಖಾಸಗಿ ಈವೆಂಟ್ ಮ್ಯಾನೇಜೆಂಟ್ ಕಂಪೆನಿಯ ಅರುಣ್ ಹಾಗೂ ಬಾಬು ಎಂಬ ಇಬ್ಬರು ಯುವಕರನ್ನು ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಖಾಸಗಿ ಕಂಪೆನಿಯೊಂದರ 15ನೆ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಕಿರು ವಿಡಿಯೋ ಚಿತ್ರೀಕರಣ ಮಾಡಲು ಅರುಣ್ ಹಾಗೂ ಬಾಬು ಯತ್ನಿಸಿದ್ದರು. ವಿಚಾರಣೆ ವೇಳೆ ‘ಡ್ರೋನ್ ಹಾರಾಟ ನಿಷಿದ್ಧ ವಲಯ ಎಂಬುದನ್ನು ತಿಳಿಯದೇ ಹಾರಿಸಲು ಯತ್ನಿಸಿದ್ದಾಗಿ' ಯುವಕರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಹಿನ್ನೆಲೆ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣಾ ಪೊಲೀಸರು ಎಚ್ಚರಿಕೆ ನೀಡಿ, ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ಗೊತ್ತಾಗಿದೆ.