ಬೆಂಗಳೂರಿನಲ್ಲಿ DMK ಮುಖಂಡನ ಕೊಲೆ ಯತ್ನ ಪ್ರಕರಣ: ಓರ್ವ ಆರೋಪಿ ಸೆರೆ

Update: 2023-09-10 14:48 GMT

 ಗುರುಸ್ವಾಮಿ- DMK ಮುಖಂಡ

ಬೆಂಗಳೂರು, ಸೆ.10: ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ತಮಿಳುನಾಡಿನ DMK ಮುಖಂಡ, ರೌಡಿಶೀಟರ್ ಗುರುಸ್ವಾಮಿ ಕೊಲೆ ಯತ್ನ ಪ್ರಕರಣ ಸಂಬಂಧ ಬಾಣಸವಾಡಿ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದಿರುವ ಬಗ್ಗೆ ವರದಿಯಾಗಿದೆ.

ಆರೋಪಿ ಪ್ರಸನ್ನ ಎಂಬಾತನನ್ನು ಪೊಲೀಸರು ತಮಿಳುನಾಡಿನ ಮಧುರೈನಿಂದ ನಗರಕ್ಕೆ ಕರೆತಂದು ಜೊತೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸಿದ್ದಾರೆ.

ತಮಿಳುನಾಡಿನ ಮಧುರೈ ಮೂಲದ ಗುರುಸ್ವಾಮಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ. ಸೆ.4ರಂದು ಬ್ರೋಕರ್ ಸಂಪರ್ಕಿಸಲು ನಗರದ ಕಮ್ಮನಹಳ್ಳಿಗೆ ಬಂದಿದ್ದ. ಅಲ್ಲಿನ ಹೋಟೆಲ್ ಒಂದರಲ್ಲಿ ಟೀ ಕುಡಿಯುವಾಗಲೇ ತಮಿಳುನಾಡಿನಿಂದ ಬಂದಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಗುರುಸ್ವಾಮಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದರು.

ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಗುರುಸ್ವಾಮಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಲೆಯತ್ನದ ಹಿಂದೆ ಹಳೆದ್ವೇಷ ಇರಬಹುದು ಎಂಬುದನ್ನು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡ ಪೊಲೀಸರು ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಮಧುರೈ ಹಾಗೂ ಧರ್ಮಪುರಿಯಲ್ಲಿ ಶೋಧ ನಡೆಸಿ ಆರೋಪಿ ಪ್ರಸನ್ನ ಎಂಬುವವನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕೀಯ ನಂಟು ಹೊಂದಿರುವ ರೌಡಿಶೀಟರ್ ಗುರುಸ್ವಾಮಿಗೆ 2003ರಿಂದಲೂ ವಿರೋಧಿ ಬಣದ ಜೊತೆ ತಿಕ್ಕಾಟ ನಡೆಯುತ್ತಿದೆ. ಈ ಎರಡು ಬಣದ ಗ್ಯಾಂಗ್‍ಗಳ ನಡುವೆ ಗ್ಯಾಂಗ್‍ವಾರ್ ನಡೆಯುತ್ತಿತ್ತು. ಮೇಲ್ನೋಟಕ್ಕೆ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದ್ದರೂ, ನಿಖರ ಮಾಹಿತಿ ಪ್ರಮುಖ ಆರೋಪಿಗಳ ಬಂಧನ ಬಳಿಕವೇ ಗೊತ್ತಾಗಲಿದೆ. ಗ್ಯಾಂಗ್ ಪ್ರಮುಖ ಆರೋಪಿ ನವೀನ್ ಹಾಗೂ ಆತನ ಸಹಚರರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಆರೋಪಿ ನವೀನ್ ಅಪರಾಧ ಪ್ರಕರಣವೊಂದರ ವಾರೆಂಟ್ ಜಾರಿ ಹಿನ್ನೆಲೆ ತಮಿಳುನಾಡು ಪೊಲೀಸರ ಮುಂದೆ ಶರಣಾಗಿ ಜೈಲು ಪಾಲಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News