ಕೆಆರ್ ಎಸ್‍ಗೆ ಮುತ್ತಿಗೆ ಯತ್ನ: ಕನ್ನಡಪರ ಹೋರಾಟಗಾರರ ಬಂಧನ

Update: 2023-08-26 16:13 GMT

ಮಂಡ್ಯ, ಆ.26: ತಮಿಳುನಾಡಿಗೆ ನೀರು ಹರಿಸುತ್ತಿರುವ ಸರಕಾರದ ವಿರುದ್ಧ ಕೆಆರ್ ಎಸ್‍ ಜಲಾಶಯಕ್ಕೆ ಶನಿವಾರ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂದಿಸಿದ್ದಾರೆ.

ಕನ್ನಡಿಗರ ರಕ್ಷಣಾ ವೇದಿಕೆ, ಕರ್ನಾಟಕ ನವ ನಿರ್ಮಾಣ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರುಗಳನ್ನು ಪೊಲೀಸರು ಬಂದಿಸಿ ನಂತರ ಬಿಡುಗಡೆ ಮಾಡಿದರು.

ಬೆಂಗಳೂರಿನಿಂದ ಆಗಮಿಸಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಲಾಶಯದ ಬಳಿ ಪ್ರತಿಭಟನೆ ನಡೆಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಿಲ್ಲ. ಇಲ್ಲಿನ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸತತವಾಗಿ ತಮಿಳುನಾಡಿಗೆ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡಿದೆ ಎಂದು ಅವರು ಕಿಡಿಕಾರಿದರು.

ನಂತರ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ, ಪೊಲೀಸರು ಪ್ರತಿಭಟನಾಕಾರರನ್ನು ತಮ್ಮ ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಕೆಆರ್‍ಎಸ್‍ಗೆ ತೆರಳುವ ಮಾರ್ಗಮಧ್ಯೆ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ರಸ್ತೆತಡೆ ನಡೆಸಿದರು.

ಕನ್ನಡಪರ ಸಂಘಟನೆಗಳ ರಾಜ್ಯ ಮುಖಂಡರಾದ ನೀಲೇಶ್‍ಗೌಡ, ಲೋಕೇಶ್‍ಗೌಡ, ಪ್ರಕಾಶ್‍ಗೌಡ, ರಮೇಶ್, ಕೃಷ್ಣೇಗೌಡ, ಎಂ.ಬಿ.ನಾಗಣ್ಣಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News