ಸಂವಿಧಾನದ ತಳಹದಿಗೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜಾತ್ಯಾತೀತತೆ, ಸಮಾನತೆ, ಭ್ರಾತೃತ್ವ ತತ್ವಗಳೇ ಸಂವಿಧಾನದ ತಳಹದಿ. ಇದಕ್ಕೆ ಧಕ್ಕೆ ತರುವ ಪ್ರಯತ್ನಗಳನ್ನು ವಿಫಲಗೊಳಿಸಬೇಕಾಗಿರುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇದಕ್ಕೆ ಯಾವ ಪಕ್ಷ, ಗುಂಪು ಇಲ್ಲ. ಸಂವಿಧಾನ ಈ ದೇಶದ ಎಲ್ಲಾ ಜನರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಾರತ ಸಂವಿಧಾನ ಹಾಗೂ ರಾಷ್ಟ್ರೀಯ ಐಕ್ಯತಾ ಸಮಾವೇಶಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಐಕ್ಯತಾ ಸಮಾವೇಶ
ಭಾರತದ ಸಂವಿಧಾನ ಜಾರಿಗೆ ಬಂದು 75 ನೇ ವರ್ಷಕ್ಕೆ ಕಾಲಿಟ್ಟಿದೆ. 75 ನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಲು ಸರಕಾರ ತೀರ್ಮಾನಿಸಿದ್ದು, ಕರ್ನಾಟಕದಾದ್ಯಂತ 31 ಜಿಲ್ಲೆಗಳಲ್ಲಿ ಸಂವಿಧಾನ ಜಾಥಾ ಜನವರಿ 26 ರಿಂದ ಫೆ. 23ರವರೆಗೆ ಹಮ್ಮಿಕೊಳ್ಳಲಾಗಿದೆ. ಫೆ. 24-25 ಎರಡು ದಿಗಳು ರಾಷ್ಟ್ರೀಯ ಏಕತಾ ಸಮಾವೇಶ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಭಾಷಣಕಾರರು, ಖ್ಯಾತ ಚಿಂತಕರಾದ ಪ್ರೊ. ಅಸುತೋಶ್ ವರ್ಶನಿ ಹಾಗೂ ಡಾ. ಗಣೇಶ್ ದೇವಿ, ಪ್ರೊ. ಜಯಂತಿ ಘೋಷ್, ಪ್ರೊ. ಸುಖದೇವ್ ಥೋರಟ್, ಪ್ರೊ. ಕಾಂಚಾ, ಪ್ರಶಾಂತ್ ಭೂಷಣ್, ಬಿಜುವಾಡ ವಿಲ್ಸನ್ , ಮೇಧಾ ಪಾಟ್ಕರ್ ಮುಂತಾದ ಅನೇಕ ಚಿಂತಕರು ಮೇಧಾವಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ. ದೇಶದ ಸಮಸ್ಯೆಗಳು, ಜನರ ಬವಣೆಗಳು, ಸಂವಿಧಾನದಲ್ಲಿ ಅದಕ್ಕೆ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪಿಠಿಕೆಯನ್ನು ಓದಿಸಲಾಗುತ್ತಿದೆ. ಸಂವಿಧಾನ ರಚನೆಯಾದ ನಂತರ ಮೊದಲನೇ ಬಾರಿಗೆ ಬಜೆಟ್ ಪುಸ್ತಕದ ಮುಖಪುಟದಲ್ಲಿ ಪೀಠಿಕೆಯನ್ನು ಮುದ್ರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಾಗೃತಿ ಮೂಡಬೇಕು
ದೇಶದ ಜನರಿಗೆ ಸಂವಿಧಾನ ನಮಗೇನು ಕೊಟ್ಟಿದೆ ಎನ್ನುವುದನ್ನು ತಿಳಿಯಬೇಕು. ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಂತ್ರಗಳನ್ನು ನೀಡಿದ್ದಾರೆ. ಹೋರಾಟ ಇಲ್ಲದೇ ಸಂವಿಧಾನದಲ್ಲಿ ಹೇಳಿರುವ ಅನೇಕ ಹಕ್ಕುಗಳು ನಮಗೆ ದಕ್ಕುತ್ತಿರಲಿಲ್ಲ. ಸ್ವಾತಂತ್ರ್ಯ ಬಂದು 77 ವರ್ಷಗಳಾಯಿತು. ಸಂವಿಧಾನ ಜಾರಿಯಾಗಿ 75 ನೇ ವರ್ಷವಾದರೂ ಎಲ್ಲರಿಗೂ ಎಲ್ಲ ಹಕ್ಕುಗಳು ಸಿಕ್ಕಿಲ್ಲ. ಸಂವಿಧಾನ ಜಾರಿ ಬಂದ ಸಂದರ್ಭದಲ್ಲಿ ವೈರುಧ್ಯತೆ ಇರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ ಎಂದು ಅಂಬೇಡ್ಕರ್ ಹೇಳಿದ್ದರು. ದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಸಮಾನತೆ ಇದೆ. ಇಷ್ಟು ವರ್ಷಗಳಾದರೂ ಅಸಮಾನತೆ ನಮ್ಮ ದೇಶದಿಂದ ಹೋಗಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಆರ್ಥಿಕ, ಸಾಮಾಜಿಕ, ಸಮಾನತೆಯನ್ನು ಸಂವಿಧಾನ ಕೊಟ್ಟಿದ್ದರೂ ನಮಗ್ಯಾಕೆ ಸಿಕ್ಕಿಲ್ಲ ಎಂಬ ಜಾಗೃತಿ ಮೂಡಬೇಕು. ಕೊಟ್ಟಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಅದಕ್ಕಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಬೋಧಿಸುವ ಸಂವಿಧಾನ:
ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕಾದ್ದು ಸರಕಾರಗಳ ಕರ್ತವ್ಯ. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸಂವಿಧಾನ ತಿಳಿಸುತ್ತದೆ, ಆದರೆ ಅದು ಪಾಲನೆಯಾಗುತ್ತಿದೆಯೇ? ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಿಜವಾಗಲೂ ಆಗುತ್ತಿದೆಯೇ? ಸಾಮಾಜಿಕ ನ್ಯಾಯ ಮತ್ತು ಅವಾಕಶಗಳನ್ನು ಪಡೆಯಲು ಜನರು ಪ್ರಯತ್ನಿಸಲು ಜಾಗೃತಿ ಮೂಡಿಸಲು ಫೆಬ್ರವರಿ 24 ಮತ್ತು 25 ರಂದು ಭಾರತ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು
ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು