ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ತಡೆಯಲು ಟಾಸ್ಕ್‌ ಫೋರ್ಸ್ : ಡಿ.ಕೆ.ಶಿವಕುಮಾರ್

Update: 2024-11-25 14:57 GMT

ಬೆಂಗಳೂರು  : ಕಾಲುವೆಗಳಿಂದ ಅಕ್ರಮವಾಗಿ ನೀರನ್ನು ಎತ್ತುವುದನ್ನು ತಡೆಯಲು ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಪಂಪ್ ಸೆಟ್‍ಗಳಿಗೆ ವಿದ್ಯುತ್ ಪೂರೈಸುವ ಇಂಧನ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ನೀರಾವರಿ(ತಿದ್ದುಪಡಿ) ಅಧಿನಿಯಮ ಕುರಿತ ಅಧಿಕಾರಿಗಳು ಹಾಗೂ ಇಂಜಿನಿಯರ್‌ ಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಬಳಕೆದಾರರ ಸಹಕಾರ ಸಂಘಕ್ಕೆ ಶಕ್ತಿ ತುಂಬಬೇಕು. ಇದಕ್ಕೆ ಶಕ್ತಿ ತುಂಬಿ ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ರೈತರಲ್ಲಿ ಅರಿವು ಮೂಡಿಸಬೇಕು. ಹಂತಹಂತವಾಗಿ ಕರ್ನಾಟಕ ನೀರಾವರಿ(ತಿದ್ದುಪಡಿ) ಅಧಿನಿಯಮ 2024 ಅನ್ನು ಜಾರಿಗೊಳಿಸಿ ಎಂದು ಎಂದು ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಹೇಳಿದರು.

ಸಚಿವ ಎಚ್.ಕೆ ಪಾಟೀಲ್ ಅವರು ನೀರು ಬಳಕೆದಾರರ ಸಹಕಾರ ಸಂಘ ಆರಂಭಿಸಿದ್ದು, ಅದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಅದನ್ನು ಬಲಪಡಿಸಬೇಕಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಚರ್ಚಿಸಿ ಬಜೆಟ್‍ನಲ್ಲಿ ಹಣ ಮೀಸಲಿಟ್ಟು, ವಾಲ್ಮಿ (ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ) ನೇತೃತ್ವದಲ್ಲಿ ಈ ಸಹಕಾರ ಸಂಘಗಳಿಗೆ ಜವಾಬ್ದಾರಿ ನೀಡಲಾಗುವುದು. ಈ ಸಂಘಗಳ ಸ್ವರೂಪದ ಜವಾಬ್ದಾರಿ ನಿಮಗೆ ನೀಡುತ್ತಿದ್ದೇವೆ. ಕೆರೆ ತುಂಬಿಸುವ ಯೋಜನೆಗಳಿಗೆ ಬಹಳಷ್ಟು ವೆಚ್ಚ ಮಾಡಲಾಗಿದೆ. ಕುಡಿಯುವ ಉದ್ದೇಶಕ್ಕೆ ತುಂಬಿಸುವ ನೀರನ್ನು ನೀರಾವರಿಗೆ ಬಳಸಿದರೆ ಈ ಯೋಜನೆ ಉದ್ದೇಶವೇನು? ಈ ಬಗ್ಗೆಯೂ ವ್ಯಾಪಕ ಚರ್ಚೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನೀರು ಬಳಕೆದಾರರ ಫೆಡರೇಷನ್ ಸ್ಥಾಪಿಸಬೇಕು. ಮುಂದಿನ ಎರಡ್ಮೂರು ತಿಂಗಳಲ್ಲಿ ಇದರ ಬಗ್ಗೆ ನೀವು ಅವಲೋಕನ ಮಾಡಬೇಕು. ರೈತರಿಗೆ ನೀಡುವ ಉಚಿತ ವಿದ್ಯುತ್‍ಗೆ 13 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕರ್ನಾಟಕ ನೀರಾವರಿ(ತಿದ್ದುಪಡಿ) ಅಧಿನಿಯಮ 2024ರಲ್ಲಿ ಬಹಳ ಮಹತ್ತರ ತಿದ್ದುಪಡಿ ತರಲಾಗಿದೆ. ಈ ಕುರಿತು ಇನ್ನಷ್ಟು ಚರ್ಚೆ ನಡೆಯಲಿದ್ದು, ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಲಿದೆ. ರೈತರನ್ನು ಉಳಿಸುವುದು ನಮ್ಮ ಉದ್ದೇಶ. ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಬೇರೆ ಕಾನೂನು ಮಾಡಲು ಸಾಧ್ಯವಿಲ್ಲ. ಈ ತಿದ್ದುಪಡಿ ಮೂಲಕ ಉಪ ಆಯುಕ್ತರ ಅಧಿಕಾರವನ್ನು ಸೂಪರಿಡಿಂಟೆಡ್ ಇಂಜಿನಿಯರ್‌ ಗೆ ನೀಡಿದ್ದೇವೆ. ಈ ವಿಚಾರವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಎತ್ತಿನಹೊಳೆ ಯೋಜನೆಯನ್ನು ನಾವು 25 ಸಾವಿರ ಕೋಟಿವೆಚ್ಚ ಮಾಡಿದ್ದೇವೆ. ಇಷ್ಟು ಹಣ ಖರ್ಚು ಮಾಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸದಿದ್ದರೆ ಹೇಗೆ. ಈ ಯೋಜನೆಯಲ್ಲಿ 3 ತಿಂಗಳಲ್ಲಿ ಸಿಗುವ ನೀರು ಕೇವಲ 24 ಟಿಎಂಸಿಯಷ್ಟು ಮಾತ್ರ. ಮುಂದಿನ ದಿನಗಳಲ್ಲಿ ಇದಕ್ಕೆ ಬೇರೆ ಯೋಜನೆ ಹಾಕಿ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವಿದೆ. ಕಾರಣ ಈ ಭಾಗದಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆದು ತರಕಾರಿ, ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ನೀರು ಹೆಚ್ಚಾಗಿ ಸಿಗುತ್ತಿರುವ ಭಾಗಗಳ ಜನರಿಗೆ ನೀರಿನ ಬಳಕೆ ಬಗ್ಗೆ ಹೆಚ್ಚು ಅರಿವಿಲ್ಲ. ಹೀಗಾಗಿ ಈ ತಿದ್ದುಪಡಿ ತರಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಈ ತಿದ್ದುಪಡಿ ಬಂದಿದೆ ಎಂದು ಏಕಾಏಕಿ ನೀವು ನುಗ್ಗಬೇಡಿ. ಕಾನೂನು ಇದೆ ಎಂದು ರೈತರಿಗೆ ಕಿರುಕುಳ ನೀಡಬೇಡಿ. ಹಂತಹಂತವಾಗಿ ಜಾರಿಗೊಳಿಸಿ. ಅಕ್ರಮವಾಗಿ ಕಾಲುವೆಗಳಲ್ಲಿ ಮೋಟರ್ ಇಟ್ಟಿರುವ ರೈತರಿಗೆ ತಮ್ಮ ತಪ್ಪಿನ ಬಗ್ಗೆ ಈಗಿನಿಂದಲೇ ಜಾಗೃತಿ ಮೂಡಿಸಿ. ಈ ವಿಚಾರದಲ್ಲಿ ರೈತರ ಸಹಕಾರ ಬಹಳ ಮುಖ್ಯ ಎಂದು ಶಿವಕುಮಾರ್ ಹೇಳಿದರು.

ಎತ್ತಿನಹೊಳೆ ಯೋಜನೆ ನೀರು ಕೋಲಾರಕ್ಕೆ ಇನ್ನು ಹೋಗಿಲ್ಲ, ಈಗಾಗಲೇ ಶಾಸಕರುಗಳು 100, 150 ಕೋಟಿ ಮೊತ್ತದ ಯೋಜನೆಗಳನ್ನು ತರುತ್ತಿದ್ದಾರೆ. ಎಲ್ಲಾ ಅಣೆಕಟ್ಟುಗಳ ಗೇಟ್‍ಗಳ ದುರಸ್ಥಿಗೆ ನಾವು ಮುಂದಾಗಿದ್ದೇವೆ. ಇದಕ್ಕಾಗಿ ಸಮಿತಿ ರಚಿಸಿ, ವರದಿ ಪಡೆಯಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News