ಎ.17ರಂದು ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ಹೋರಾಟ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ಕೇಂದ್ರ ಸರಕಾರದ ಈ ಬೆಲೆ ಏರಿಕೆ ವಿರುದ್ಧ ನಾವು ಎ.17ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯ ಮಟ್ಟದ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಇಂದು ರಾಜ್ಯದಲ್ಲಿ ಅಧಿಕಾರದಲ್ಲಿದೆ. ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟು ಬೆಲೆ ಏರಿಕೆಯಿಂದ ಬಡವರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಬೆಲೆ ಏರಿಕೆ ಪ್ರಾರಂಭವಾಗಿರುವುದು ಕೇಂದ್ರ ಸರಕಾರದಿಂದ. ಹೀಗಾಗಿ ಬಿಜೆಪಿಯವರು ಹೋರಾಟ ಮಾಡುವುದಾದರೆ ಕೇಂದ್ರ ಸರಕಾರದ ವಿರುದ್ಧ ಮಾಡಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸೀಮೆಂಟ್, ಬೇಳೆ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿದೆ ಎಂದು ಅವರು ಕಿಡಿಗಾರಿದರು.
ಜಿ.ಎಸ್.ಟಿ ಮೂಲಕ ಕೊಡಬಾರದ ಕಿರುಕುಳ ನೀಡುತ್ತಿದ್ದಾರೆ. ಆದರೂ ನಮ್ಮ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರು ಹೋರಾಟ ಆರಂಭಿಸಿದ ದಿನವೇ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ 2 ರುಪಾಯಿ, ಅಡುಗೆ ಅನಿಲ ಬೆಲೆ 50 ರೂಪಾಯಿ ಏರಿಕೆ ಮಾಡಿದೆ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.