‘ಜಾತಿ ಗಣತಿ’ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ : ನಿಖಿಲ್ ಲೇವಡಿ

Update: 2025-04-14 18:53 IST
‘ಜಾತಿ ಗಣತಿ’ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ : ನಿಖಿಲ್ ಲೇವಡಿ
  • whatsapp icon

ಬೆಂಗಳೂರು: ‘ಜಾತಿ ಗಣತಿ ವರದಿಯು ಸಿದ್ದರಾಮಯ್ಯ ಅವರಿಂದ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋರಿಕೆ ಆಗಿರುವ ಈ ವರದಿಯಲ್ಲಿ ಇವೆ ಎನ್ನಲಾದ ಅಂಕಿ-ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 7ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿ. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಟೆಸ್ಟ್ ರನ್: ಜಾತಿ ಗಣತಿ ವರದಿಯವು ಎನ್ನಲಾದ ಕೆಲ ಅಂಕಿ-ಅಂಶ ಸೋರಿಕೆಯಾಗಿದೆ. ಈ ಅಂಕಿ ಅಂಶಗಳನ್ನು ಹೊರ ಹಾಕಿರುವವರು ಅಥವಾ ಸೋರಿಕೆ ಮಾಡಿದವರು ಯಾರು? ವರದಿ ಅಧಿಕೃತವಾಗಿ ಇನ್ನೂ ಬಹಿರಂಗ ಆಗಿಲ್ಲ. ಅಂಕಿ-ಅಂಶಗಳು ಎಲ್ಲ ಕಡೆ ತೇಲಾಡುತ್ತಿವೆ. ಆದರೆ, ಇದು ಅನಧಿಕೃತ ಮಾಹಿತಿ. ಊಹಾಪೋಹದ ಅಂಕಿ-ಅಂಶಗಳು. ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಟೆಸ್ಟ್ ರನ್ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ತನಿಖೆ ನಡೆಸಿ: ‘ಕಾಂತರಾಜು ಆಯೋಗದ ವರದಿಗೆ 150 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಆದರೆ, ಆಯೋಗ ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಸೃಷ್ಟಿಯಾದ ವರದಿ ಇದು. ಹಾಗಾದರೆ, ಇಷ್ಟು ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾರೆ. ಯಾರ ಮನೆಗೆ ಹೋಗಿದ್ದಾರೆ? ಯಾಕೆ ಇಷ್ಟು ಹಣ ಖರ್ಚು ಮಾಡಿದ್ದಾರೆ? ಇದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಿಖಿಲ್ ಒತ್ತಾಯ ಮಾಡಿದರು.

ಗಣತಿ ನಡೆಯಬೇಕು: ‘ಆಗಬೇಕಿರೋದು ಆರ್ಥಿಕ, ಶೈಕ್ಷಣಿಕ ಸಮಾನತೆ ಜಾತಿಗಣತಿ ಆಗಬೇಕಿತ್ತು. ಅದರೆ ಜಾತಿಗಣತಿ ಒಂದು ದಶಕದ ಹಿಂದೆಯೇ ಕಾಂತರಾಜು ಸಮಿತಿಯನ್ನ ರಚನೆ ಮಾಡಿ ಅವರ ಮೂಲಕ ಸರ್ವೇ ಮಾಡಲು ತೆಗೆದುಕೊಂಡು ತೀರ್ಮಾನ ಇದು’

-ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ

(ಪ್ರಕಾಶ್)

………………..

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News