ಮೂರು ಕ್ಷೇತ್ರಗಳ ಗೆಲುವು ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ಜನರು ಕೊಟ್ಟ ಲೈಸನ್ಸ್ ಅಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ಮಹಾರಾಷ್ಟ್ರ ರಾಜ್ಯದಲ್ಲಿ ಕಾಂಗ್ರೆಸ್ಸಿಗರೆಲ್ಲರೂ ಈ ಸಾರಿ ಬಿಜೆಪಿಯನ್ನು ಬೆಂಬಲಿಸಿದ್ದು, ಅದರಿಂದ ನಾವು ಗೆದ್ದೆವು ಎಂದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪುತ್ತಾರಾ? ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಸೋಮವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ 3 ಲೋಕ, 3 ರಾಜ್ಯಗಳನ್ನು ಗೆದ್ದಂತೆ ವಿಜೃಂಭಿಸುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜೆಡಿಎಸ್-ಬಿಜೆಪಿ ನಾಯಕರು ತಮ್ಮನ್ನು ಬೆಂಬಲಿಸಿದ್ದಾಗಿ ಹೇಳಿದ್ದು, ಇದೊಂದು ಶುದ್ಧ ಸುಳ್ಳು ಮತ್ತು ದಾರಿ ತಪ್ಪಿಸುವ ಕೆಲಸ ಎಂದು ಖಂಡಿಸಿದರು.
3 ಕ್ಷೇತ್ರಗಳ ಗೆಲುವು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರಕ್ಕೆ ಜನರು ಕೊಟ್ಟ ಲೈಸನ್ಸ್ ಅಲ್ಲ. ಸೋತಲ್ಲೆಲ್ಲ ಇವಿಎಂ ತಿರುಚಿದ್ದಾರೆನ್ನುವ ಕಾಂಗ್ರೆಸ್ಸಿಗರಿಗೆ ಇಲ್ಲಿ 3 ಸ್ಥಾನ ಗೆದ್ದ ಮೇಲೆ ಇವಿಎಂ ತಿರುಚಿಲ್ಲ ಎಂಬ ನಂಬಿಕೆ ಬಂದಿರಬಹುದು. ಮಹಾರಾಷ್ಟ್ರದಲ್ಲಿ ಇವಿಎಂ ತಿರುಚಿದ್ದರೆ, ಜಾರ್ಖಂಡ್, ವಯನಾಡಿನಲ್ಲಿ ಬಿಜೆಪಿಯವರಿಗೆ ಏಕೆ ಇವಿಎಂ ತಿರುಚಲು ಸಾಧ್ಯವಾಗಿಲ್ಲ ಎಂದು ಕೇಳಿದರು.