ಬಿಜೆಪಿ ಸರಕಾರ 2,865 ಎಕರೆ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ?: ಸಚಿವ ಪ್ರಿಯಾಂಕ್ ಖರ್ಗೆ

Update: 2024-11-25 15:13 GMT

 ಪ್ರಿಯಾಂಕ್ ಖರ್ಗೆ

ಬೆಂಗಳೂರು : 2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಸುಳ್ಳಿನ ಮೆರವಣಿಗೆಗಾಗಿ ಸತ್ಯದ ಕೊಲೆ ಮಾಡಿ ಸಮಾಧಿ ಮಾಡುವ ಪ್ರಯತ್ನ “ಭ್ರಷ್ಟ ಜನತಾ ಪಾರ್ಟಿ“ಯವರದ್ದು. ಆದರೆ, ಸತ್ಯಕ್ಕೆ ಸಾವಿಲ್ಲ ಎಂಬ ಅರಿವು ಅವರಿಗೆ ಇದ್ದಂತಿಲ್ಲ ಎಂದು ಟೀಕಿಸಿದ್ದಾರೆ.

ಕೂಸನ್ನು ಚಿವುಟುವುದೂ ಬಿಜೆಪಿಯವರೇ, ತೊಟ್ಟಿಲು ತೂಗುವುದೂ ಬಿಜೆಪಿಯವರೇ, ಬಿಜೆಪಿಯವರ ಈ ಕಳ್ಳಾಟ ವಕ್ಫ್ ವಿಚಾರದಲ್ಲಿ ಬಟಾಬಯಲಾಗಿದೆ. ಅಂದಹಾಗೆ, ಬಿಜೆಪಿಗರು ನಡೆಸುತ್ತಿರುವುದು ರೈತರ ಪರವಾದ ಹೋರಾಟವಲ್ಲ, ವಿಜಯೇಂದ್ರ ಹಠಾವೋ ಹೋರಾಟ. ಈ ಸತ್ಯ ಜಗನ್ನಾಥ ಭವನದ ಪ್ರತಿ ಕಿಟಕಿ ಬಾಗಿಲುಗಳಿಗೂ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

2018-2023ರ ನಡುವೆ ಬಿಜೆಪಿ ಸರಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಮಿತಿಯು ಜಿಲ್ಲಾಧಿಕಾರಿಗಳೊಂದಿಗೆ ಹಲವಾರು ಸಭೆ ನಡೆಸಿ ವಕ್ಫ್ ಆಸ್ತಿ ಗುರುತಿಸಿ, ತೆರವುಗೊಳಿಸಲು ಸೂಚನೆ ನೀಡಿದ್ದು ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.

2019ರಿಂದ 2020ರ ಅವಧಿಯಲ್ಲಿ ಬಿಜೆಪಿ ಸರ್ಕಾರ 2,865 ಎಕರೆ ವಿಸ್ತೀರ್ಣದ ಜಮೀನಿಗೆ ವಕ್ಫ್ ಆಸ್ತಿ ಎಂದು ಅಧಿಸೂಚನೆ ಹೊರಡಿಸಿದ್ದು ಏಕೆ? ಹಿಂದಿನ ಬಿಜೆಪಿ ಸರಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ? ಹಿಂದಿನ ಬಿಜೆಪಿ ಸರಕಾರ 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ? ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

ರೈತರ ಹೆಸರಲ್ಲಿರುವ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಬೇಕು ಎಂದು ಕುಮಾರ್ ಬಂಗಾರಪ್ಪ ಸಮಿತಿ ಸೂಚಿಸಿದ್ದು ಏಕೆ? ರಾಜ್ಯದಾದ್ಯಂತ ತಾಲೂಕುವಾರು ವಕ್ಫ್ ಆಸ್ತಿಗಳನ್ನು ಪರಿಶೀಲಿಸಿ ಭೂಮಿ ಸಾಫ್ಟ್ ವೇರ್ ನಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಬೇಕು ಎಂದು ಸೂಚಿಸಿದ್ದು ಏಕೆ? ಬಿಜೆಪಿ ಸರಕಾರದ ಅವಧಿಯ ಕುಮಾರ್ ಬಂಗಾರಪ್ಪ ಸಮಿತಿ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯನ್ನು ವಕ್ಫ್ ಆಸ್ತಿ ಎಂದು ನೀಡಿದ್ದ ವರದಿಯನ್ನು ಸದನದಲ್ಲಿ ಅಂಗೀಕರಿಸಲಾಗಿತ್ತು, ಆಗ ಬಿಜೆಪಿಯವರ ಪ್ರಜ್ಞೆ ಎಲ್ಲಿ ಉದುರಿ ಬಿದ್ದಿತ್ತು? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಎಲ್ಲ ಪ್ರಶ್ನೆಗಳಿಗೆ ವಕ್ಫ್ ಆಸ್ತಿ ಅಲ್ಲಾಹ್‍ನ ಆಸ್ತಿ ಎಂದಿದ್ದ ಬಸವರಾಜ ಬೊಮ್ಮಾಯಿ ಉತ್ತರಿಸುತ್ತಾರೋ? ಟಿಪ್ಪು ಟೋಪಿ ಧರಿಸಿ ಖಡ್ಗ ಹಿಡಿದಿದ್ದ ಯಡಿಯೂರಪ್ಪ ಉತ್ತರಿಸುತ್ತಾರೋ? ಅಥವಾ ವಕ್ಫ್ ವಿಚಾರಕ್ಕಾಗಿ ರಾಜ್ಯ ಪ್ರವಾಸಕ್ಕೆ ಹೊರಡುತ್ತಿರುವ ಬಿಜೆಪಿಯ ಎ ಟೀಮ್, ಬಿ ಟೀಮ್ ನಾಯಕರು ಜನತೆಗೆ ಈ ಸತ್ಯಗಳನ್ನು ತಿಳಿಸಲು ಬರುತ್ತಾರೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News