ಆಧಾರವಿಲ್ಲದ ಆರೋಪಗಳು, ಸುಳ್ಳು ಹೇಳಿಕೆಗಳಿಂದ ಕರ್ನಾಟಕದ ರಾಜಕೀಯವೇ ಹಾಳಾಗುತ್ತಿದೆ : ಎ.ಎಸ್.ಪೊನ್ನಣ್ಣ
ಬೆಂಗಳೂರು : ಜೆಡಿಎಸ್, ಬಿಜೆಪಿಯವರ ಆಧಾರವಿಲ್ಲದ ಆರೋಪಗಳು, ಸುಳ್ಳು ಹೇಳಿಕೆಗಳಿಂದ ಕರ್ನಾಟಕ ರಾಜ್ಯದ ರಾಜಕೀಯವೇ ಹಾಳಾಗುತ್ತಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಮುಡಾ ವರದಿ ಕೊಂಡೊಯ್ದಿದ್ದಕ್ಕೆ ದಾಖಲೆ ಏನಿದೆ?. ವಿಪಕ್ಷಗಳ ಬಳಿಯಲ್ಲಿ ಯಾವುದೇ ಖಚಿತ ಮಾಹಿತಿಗಳಿಲ್ಲ. ಇದೆಲ್ಲಾ ಕಾಲ್ಪನಿಕ ಆರೋಪ. ಉಪಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲೂ ವಿಪಕ್ಷಗಳಿಗೆ ದೊಡ್ಡ ಸೋಲಾಗಿದೆ. ಇದೆಲ್ಲಾ ಆದರೂ ಅವರು ಬುದ್ಧಿ ಕಲಿತಿಲ್ಲ ಎಂದು ಕಿಡಿಕಾರಿದರು.
ಮುಡಾ ಪ್ರಕರಣದಲ್ಲಿ ದಾಖಲೆ ಎಲ್ಲಿಂದ ಸೋರಿಕೆಯಾಗಿದೆ. ಎಲ್ಲಾ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿದೆ. ಪಾವಿತ್ರ್ಯತೆಯನ್ನು ಎಲ್ಲರೂ ಕಾಪಾಡಬೇಕು. ಸ್ನೇಹಮಯಿ ಕೃಷ್ಣ ದೂರು ಕೊಟ್ಟಿದ್ದಾರೆ. ಕಾನೂನು ಪಾಲನೆ ಮಾಡಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಮಾಡುವುದು ಬೇಡ. ಅವರ ಪಕ್ಷದಲ್ಲೇ ಒಡಕು ಮೂಡಿದೆ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪೊನ್ನಣ್ಣ ತಿಳಿಸಿದರು.