ಪಾರಂಪರಿಕ ಕಾರಿಡಾರ್ ಆಗಿ ಬಸವನಗುಡಿ ಅಭಿವೃದ್ಧಿ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-11-25 15:54 GMT

ಬೆಂಗಳೂರು : ‘ಬ್ರಾಂಡ್ ಬೆಂಗಳೂರು’ ಅಡಿಯಲ್ಲಿ ಬಸವನಗುಡಿಯನ್ನು ಧಾರ್ಮಿಕ ಹಾಗೂ ಪಾರಂಪರಿಕ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಬೇಕು ಎನ್ನುವ ಸ್ಥಳೀಯ ಮುಖಂಡರ ಮನವಿಗೆ ರಾಜ್ಯ ಸರಕಾರ ಸ್ಪಂದಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವೃಷಭಾವತಿ ನದಿ ಹುಟ್ಟುವ ಜಾಗಕ್ಕೆ ಮರುಜೀವ ನೀಡಿ, ಜೀವನದಿಯಾಗಿ ರೂಪಿಸಲು ಹಾಗೂ ಬಸವನಗುಡಿಯನ್ನು ಧಾರ್ಮಿಕ, ಪಾರಂಪರಿಕ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಕಡಲೆಕಾಯಿ ಪರಿಷೆಯನ್ನು ಅಂತರರಾಷ್ಟೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಎಲ್ಲರೂ ಶ್ರಮಿಸಬೇಕು. ರೈತರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂದು ಈ ಬಾರಿ ಸುಂಕ ಸಂಗ್ರಹವನ್ನು ರದ್ದು ಮಾಡಿದ್ದೇವೆ. ಈ ವರ್ಷದಿಂದ ಸುಂಕವಿಲ್ಲದ ಕಡಲೆಕಾಯಿ ಪರಿಷೆ ಪ್ರಾರಂಭವಾಗಿದೆ ಎಂದು ಅವರು ತಿಳಿಸಿದರು.

ನಾನು ಒಮ್ಮೆ ವಿದೇಶಕ್ಕೆ ಹೋದಾಗ ಹೆಬ್ಬೆಟ್ಟು ಗಾತ್ರದ ಕಡಲೆಕಾಯಿ ನೋಡಿದ್ದೆ. ಅದನ್ನು ಭಾರತಕ್ಕೆ ಕಳುಹಿಸಿ, ನಾನು ಬೆಳೆಯಬೇಕು ಎಂದು ಸ್ನೇಹಿತರಿಗೆ ತಿಳಿಸಿದ್ದೆ ಅದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಬೆಂಗಳೂರಿನ ಸುತ್ತಲಿನ ರೈತರು ಇಲ್ಲಿ ಬಂದು, ನಮ್ಮ ಶ್ರಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿದ್ದೀರಿ. ಕೆಂಪೇಗೌಡರು ರೈತರನ್ನು ಉಳಿಸಲು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರು ನಡೆಯೋಣ. ವೃಷಭಾವತಿ ನದಿ ಜನಿಸುವ ಸ್ಥಳದಲ್ಲಿ ನಿಂತು ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸದಲ್ಲಿ ನಾವೆಲ್ಲರೂ ನಿರತರಾಗಿದ್ದೇವೆ ಎಂದು ಅವರು ತಿಳಿಸಿದರು.

ವಿರೋಧ ಪಕ್ಷದ ನಾಯಕರು ಬ್ರಾಂಡ್ ಬೆಂಗಳೂರು ಬಗ್ಗೆ ಟೀಕೆ ಮಾಡಿದ್ದರು. ಇದಕ್ಕೆ 2028ಕ್ಕೆ ಮುಂಚಿತವಾಗಿ ನಾನು ಉತ್ತರ ನೀಡುತ್ತೇನೆ. ಈ ಯೋಜನೆಯಡಿ ಯಾವ ಕೆಲಸಗಳನ್ನು ಮಾಡಿದ್ದೇನೆ, ಮಾಡಲಿದ್ದೇನೆ ಎಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಎಲ್ಲ ಬಡವರಿಗೂ ಬಿಪಿಎಲ್ ಕಾರ್ಡ್: ‘ನಮ್ಮ ಸರಕಾರ ಬಡವರ ಪರವಾಗಿದ್ದು, ಎಲ್ಲ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಲಾಗುವುದು. ಇದರ ಬಗ್ಗೆ ಆತಂಕ ಪಡುವ ಆಗತ್ಯವಿಲ್ಲ, ಯಾರಿಗೂ ತೊಂದರೆಯಾಗಲು ಬಿಡುವುದಿಲ್ಲ. ಸರಕಾರ ಜಮೀನು ಕಬಳಿಸುತ್ತದೆ ಎನ್ನುವ ಬಿಜೆಪಿ ಅಪಪ್ರಚಾರವನ್ನು ಬಿಟ್ಟುಬಿಡಿ’

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News