ಬೆಂಗಳೂರು | ಕಡೆಲೆಕಾಯಿ ಪರಿಷೆ : ಮೊದಲ ದಿನವೇ ವ್ಯಾಪಾರ ಜೋರು

Update: 2024-11-25 15:31 GMT

ಬೆಂಗಳೂರು : ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಎರಡು ದಿನಗಳ ಕಾಲ ಬಸವನಗುಡಿಯ ಕಡೆಲೆಕಾಯಿ ಪರಿಷೆ ನೆಡೆಯುತ್ತಿದ್ದು, ಅದೇ ಮಾದರಿಯಲ್ಲಿ ಪರಿಷೆಗೆ ಚಾಲನೆ ಸಿಕ್ಕ ಮೊದಲ ದಿನವಾದ ಸೋಮವಾರ ಜನಸಾಗರವೇ ಹರಿದು ಬಂದಿತ್ತು.

ಬಸವನಗುಡಿಯ ಬುಲ್ ಟೆಂಪಲ್ ರಸ್ತೆ ಸೇರಿ ಸುತ್ತಮುತ್ತ ಕಡಲೆಕಾಯಿ ವ್ಯಾಪಾರ ಜೋರಾಗಿದೆ. ಮಳಿಗೆಗಳಲ್ಲಿ, ಬರಿ ನೆಲದಲ್ಲಿ ವಿವಿಧ ಬಗೆಯ ಕಡಲೆಕಾಯಿಗಳನ್ನು ರಾಶಿ ಹಾಕಿಕೊಂಡು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದರು.

ಹಸಿ ಹಾಗೂ ಹುರಿದ ಕಡಲೆಕಾಯಿಗೆ ಸೇರಿಗೆ 60 ರಿಂದ 80 ರೂಪಾಯಿಯ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ ಮಾತ್ರವಲ್ಲದೇ ಹಲವು ಬಗೆಯ ಚಾಟ್ಸ್, ಮುಸುಕಿನ ಜೋಳ, ಕರಿದ ತಿಂಡಿ ತಿನಿಸು, ಮಕ್ಕಳ ಆಟಿಕೆಗಳು, ಮನೆಗಳಿಗೆ ಬಳಸುವ ಅಲಂಕಾರಿಕ ವಸ್ತುಗಳು, ಬಗೆ ಬಗೆಯ ಸರ, ಬಟ್ಟೆಬರೆ, ಗೃಹೋಪಯೋಗಿ ವಸ್ತುಗಳು, ಬೊಂಬೆಗಳು ಹೀಗೆ ವಿವಿಧ ರೀತಿಯ ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ.

ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಹಾಗು ಕರ್ನಾಟಕದ ಸುತ್ತ ಮುತ್ತಲಿನ ರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳು ರಸ್ತೆ ಬದಿ ತಳ್ಳುವ ಗಾಡಿ, ಮಳಿಗೆಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ.

ಈ ಬಾರಿಯ ಬಸವನಗುಡಿಯ ಕಡಿಲೆಕಾಯಿ ಪರಿಷೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿ ನೆರೆಯ ರಾಜ್ಯಗಳಿಂದ ರೈತರು ಬಂದಿದ್ದು ಅವರು ನಾಟಿ, ಫಾರಂ, ಬಾದಮಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಬಸವನಗುಡಿ ದೊಡ್ಡಗಣಪತಿ ಮತ್ತು ಬಸವಣ್ಣ ದೇಗುಲಗಳಲ್ಲಿ ಒಳ ಮತ್ತು ಹೊರ ಭಾಗದಲ್ಲಿ ಐದು ದಿನಗಳ ಕಾಲ ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ರಾಮಕೃಷ್ಣ ಆಶ್ರಮ ವೃತ್ತ ಹಾಗೂ ಸುತ್ತುಮುತ್ತಲಿನ ರಸ್ತೆಗಳೆಲ್ಲ ಸಹ ದೀಪಾಲಂಕಾರ ಮಾಡಲಾಗಿದೆ. ಪರಿಷೆಗೆ ಆಗಮಿಸುತ್ತಿರುವ ಭಕ್ತರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಹೆಚ್ಚುವರಿ 2 ಟ್ಯಾಂಕರ್‌ ಗಳ ವ್ಯವಸ್ಥೆ ಮಾಡಲಾಗಿದ್ದು, ಇವುಗಳನ್ನು ಪಕ್ಕದ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ.

ಕಡಲೆಕಾಯಿ ಪರಿಷೆಯಲ್ಲಿ ಈ ಬರಿ ಕೂಡ ಬಿಬಿಎಂಪಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ಲಾಸ್ಟಿಕ್ ವಿರುದ್ಧ ಜನ ಜಾಗೃತಿ ಕಾರ್ಯವನ್ನು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕಡಲೆಕಾಯಿ ವ್ಯಾಪಾರಿಗಳು ಸಹ ಮುಜರಾಯಿ ಇಲಾಖೆ ವತಿಯಿಂದ ಪೇಪರ್ ಕವರ್‌ ಗಳನ್ನು ವಿತರಿಸಲಾಗಿದೆ ಹಾಗೂ ಪರಿಷೆಗೆ ಬರುವವರು ಬಟ್ಟೆಯ ಬ್ಯಾಗ್ ಹಾಗೂ ಕೈ ಜೀಲಗಳನ್ನು ತರುವಂತೆ ಮನವಿ ಮಾಡಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News