ಕಾಂಗ್ರೆಸ್ ಧೂಳೀಪಟ ಆಗುವುದು ನಿಶ್ಚಿತ : ಆರ್.ಅಶೋಕ್

Update: 2024-11-25 16:54 GMT

ಆರ್.ಅಶೋಕ್

ಬೆಂಗಳೂರು : ವಕ್ಫ್ ಆಸ್ತಿ ವಿಚಾರದಲ್ಲಿ ಕಾಂಗ್ರೆಸ್‍ನ ಓಲೈಕೆ ರಾಜಕಾರಣ ಜನರಿಗೆ ಅರ್ಥವಾಗಿದೆ. ಕೇಂದ್ರ ವಕ್ಫ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗೆ ಮೊದಲು ಹೇಗಾದರೂ ಮಾಡಿ ಜಮೀನು ಕಬಳಿಸಬೇಕೆಂಬ ಕಾಂಗ್ರೆಸ್ ಷಡ್ಯಂತ್ರ ಮನವರಿಕೆಯಾಗಿದೆ. ಈಗ ಮತ್ತೊಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಬಿಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ, ಹರಿಯಾಣ ರಾಜ್ಯಗಳಲ್ಲಿ ಆದಂತೆ ಕರ್ನಾಟಕದಲ್ಲೂ ಧೂಳೀಪಟ ಆಗುವುದು ನಿಶ್ಚಿತ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿ ವರದಿಯ ಆಧಾರದ ಮೇಲೆ ವಕ್ಫ್ ಜಮೀನು ಕಬಳಿಸಿದವರಿಗೆ ಬಿಜೆಪಿ ಸರಕಾರ ನೋಟಿಸ್ ನೀಡಿತ್ತು. ಒಂದು ವೇಳೆ ತಪ್ಪಾಗಿ ರೈತರಿಗೆ ನೋಟಿಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಈಗಿನ ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳಲಿ ಎಂದು ಸಲಹೆ ನೀಡಿದರು.

ಹಿಂದಿನ ಬಿಜೆಪಿ ಸರಕಾರ ಮಾಣಿಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಿ, ವಕ್ಫ್ ಭೂ ಕಬಳಿಕೆಯ ವರದಿ ರೂಪಿಸಿತ್ತು. ಆದರೆ ಈಗ ಇದರಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ನಾಯಕರು ಲಕ್ಷಾಂತರ ಎಕರೆ ವಕ್ಫ್ ಜಾಗವನ್ನು ಕಬಳಿಸಿ ಮಾರಾಟ ಮಾಡಿರುವುದು ಈ ತನಿಖಾ ವರದಿಯಲ್ಲಿ ಬೆಳಕಿಗೆ ಬಂದಿತ್ತು. ಆ ಪ್ರಕ್ರಿಯೆಯಲ್ಲಿ ಬಿಜೆಪಿ ಸರಕಾರ ನೋಟಿಸ್ ನೀಡಿದೆ. ಒಂದು ವೇಳೆ ತಪ್ಪಾಗಿ ನೋಟಿಸ್ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಲಿ ಎಂದರು.

ಮುಡಾ ಹಗರಣ ಈ ರಾಜ್ಯ ಕಂಡ ಅತಿದೊಡ್ಡ ಹಗರಣ. ಇದು ಕೇವಲ 14 ಸೈಟುಗಳಲ್ಲದೆ, ಬಡವರಿಗೆ ಸೇರಬೇಕಾದ ನೂರಾರು ಸೈಟುಗಳು ಬೇರೆಯವರ ಪಾಲಾಗಿದೆ. ಇದರ ತನಿಖೆ ಎಂದಾಕ್ಷಣ ಹಿರಿಯ ಅಧಿಕಾರಿಗಳು ದಾಖಲೆಗಳನ್ನು ಸಹಜವಾಗಿಯೇ ತಿದ್ದಿರುತ್ತಾರೆ. ಹೀಗಾಗಿ ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದೇವೆ ಎಂದರು.

ಉಪಚುನಾವಣೆಯ ಫಲಿತಾಂಶ ಭ್ರಷ್ಟಾಚಾರಕ್ಕೆ ಸಿಕ್ಕ ಕ್ಲೀನ್‍ಚಿಟ್ ಅಲ್ಲ. ಇದು ರಾಜ್ಯದ ಮತದಾರರ ತೀರ್ಪಲ್ಲ. ಸರಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಹೋರಾಟ ನಿಲ್ಲುವುದಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಸಭೆ ನಡೆಸಿ, ಅಧಿವೇಶನದಲ್ಲಿ ಮಾಡುವ ಹೋರಾಟದ ರೂಪದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ಗೆ ತಮ್ಮ ಸಹೋದರ ಡಿ.ಕೆ.ಸುರೇಶ್‍ರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರು ಎಂದೂ ಒಕ್ಕಲಿಗ ನಾಯಕರಾಗಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ನಿಖಿಲ್ ಕುಮಾರಸ್ವಾಮಿಗೆ ಮತ ಹಾಕಿಲ್ಲ ಎಂಬುದು ಕಂಡುಬಂದಿದೆ. ಉಳಿದ ಸಮುದಾಯಗಳು ಬೆಂಬಲ ನೀಡಿಲ್ಲ. ಇಲ್ಲಿ ಹಣಬಲ, ಅಧಿಕಾರ ಬಲ ಕೆಲಸ ಮಾಡಿದೆ. ಇಲ್ಲಿ ಒಕ್ಕಲಿಗ ನಾಯಕತ್ವವೇನೂ ಸೃಷ್ಟಿಯಾಗಿಲ್ಲ’

-ಆರ್.ಅಶೋಕ್ ವಿಪಕ್ಷ ನಾಯಕ

Full View

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News