ಬೆಂಗಳೂರು | ಸ್ನೇಹಿತನ ಅಪಹರಿಸಿ ಸುಲಿಗೆ ಆರೋಪ : ಯುವತಿ ಸೇರಿ ಏಳು ಆರೋಪಿಗಳ ಬಂಧನ

Update: 2024-11-24 13:46 GMT

ಸಾಂದರ್ಭಿಕ ಚಿತ್ರ(Meta AI)

ಬೆಂಗಳೂರು : ಹಳೆಯ ಸ್ನೇಹಿತನನ್ನು ಭೇಟಿಯಾಗಲು ಕರೆಸಿಕೊಂಡು ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಯುವತಿ ಸೇರಿ 7 ಜನರನ್ನು ಇಲ್ಲಿನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ಪೋತುಲ ಶಿವ ಎಂಬಾತನನ್ನು ಅಪಹರಿಸಿ ಸುಲಿಗೆಗೈದಿದ್ದ ಆರೋಪದಡಿ ಮೋನಿಕಾ, ಹರೀಶ್, ಹರಿಕೃಷ್ಣ, ರಾಜ್‍ಕುಮಾರ್, ನರೇಶ್, ಅಂಜನೀಲ್, ನರಸಿಂಹ ಎಂಬುವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

ಅಪಹರಣಕ್ಕೊಳಗಾಗಿದ್ದ ಶಿವ ಆಂಧ್ರಪ್ರದೇಶದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ದೂರದ ಸಂಬಂಧಿಯಾಗಿದ್ದ ಮೋನಿಕಾ 4 ವರ್ಷಗಳಿಂದ ಶಿವನಿಗೆ ಸ್ನೇಹಿತೆಯಾಗಿದ್ದಳು. ‘ಭೇಟಿಯಾಗೋಣ ಬಾ’ ಎಂದಿದ್ದ ಮೋನಿಕಾ, ನವೆಂಬರ್ 17 ರಂದು ಶಿವನನ್ನು ಪೆನುಗೊಂಡಕ್ಕೆ ಕರೆಸಿದ್ದಳು. ಆದರೆ, ಶಿವನನ್ನು ಸುಲಿಗೆ ಮಾಡಲು ಸಜ್ಜಾಗಿದ್ದ ಆರೋಪಿಗಳು, ಆತನ ಮೇಲೆ ಹಲ್ಲೆಗೈದು ಪಾವಗಡಕ್ಕೆ ಕರೆದೊಯ್ದಿದ್ದರು ಎಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.

ಆ ಬಳಿಕ 3 ದಿನಗಳ ಕಾಲ ಹೋಟೆಲ್‍ನಲ್ಲಿರಿಸಿಕೊಂಡು ಆತನ ಬಳಿಯಿದ್ದ ಚಿನ್ನದ ಸರ, ಬ್ರಾಸ್‍ಲೆಟ್ ಕಿತ್ತುಕೊಂಡು ಅದನ್ನು ಅಡವಿಟ್ಟು ಹಣ ಪಡೆದುಕೊಂಡಿದ್ದರು. ನಂತರ ಆರೋಪಿಗಳು ಬೆದರಿಸಿದಾಗ ಸ್ನೇಹಿತರಿಗೆ ಕರೆ ಮಾಡಿದ್ದ ಶಿವ 5 ಲಕ್ಷ ರೂಗಳನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದ. ಆದರೆ ಹಣ ವಿತ್ ಡ್ರಾ ಮಾಡಲು ಅಗತ್ಯವಿರುವ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‍ಗಳನ್ನು ಶಿವ ಮನೆಯಲ್ಲಿಟ್ಟು ಬಂದಿದ್ದ. ಶಿವನಿಂದಲೇ ಆತನ ಮನೆಯವರಿಗೆ ಕರೆ ಮಾಡಿಸಿದ್ದ ಆರೋಪಿಗಳು ಬೆಂಗಳೂರಿನ ಮೆಜೆಸ್ಟಿಕ್‍ಗೆ ಆತನ ಡೆಬಿಟ್/ಅಥವಾ ಕ್ರೆಡಿಟ್ ಕಾರ್ಡ್‍ಗಳನ್ನು ತರಿಸಿಕೊಂಡಿದ್ದರು ಎಂದು ಡಿಸಿಪಿ ಸಾರಾ ಫಾತೀಮಾ ಹೇಳಿದ್ದಾರೆ.

ನ.21ರಂದು ಹಣ ಡ್ರಾ ಮಾಡಿಸಲು ಮೂವರು ಆರೋಪಿಗಳು ಶಿವನನ್ನು ಕೋರಮಂಗಲದ ಫೋರಂ ಮಾಲ್ ಜಂಕ್ಷನ್ ಬಳಿಯಿರುವ ಎಟಿಎಂ ಬಳಿ ಕರೆತಂದಿದ್ದರು. ಆ ಸಂದರ್ಭದಲ್ಲಿ ಹಣ ಹಂಚಿಕೊಳ್ಳುವ ವಿಚಾರದಲ್ಲಿ ಇಬ್ಬರು ಆರೋಪಿಗಳು ಪರಸ್ಪರ ಜಗಳವಾಡಲಾರಂಭಿಸಿದ್ದರು. ಅದೇ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಕೋರಮಂಗಲ ಪೊಲೀಸರ ತಂಡ ಅನುಮಾನಗೊಂಡು ಆರೋಪಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿತ್ತು. ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಅಪಹರಣ ಮಾಡಿ ಹಣ ಸುಲಿಗೆ ಮಾಡುತ್ತಿರುವುದು ಬಯಲಾಗಿದೆ. ತಕ್ಷಣ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು, ಪಾವಗಡಲ್ಲಿದ್ದ ನಾಲ್ವರ ಸಹಿತ ಒಟ್ಟು 7 ಜನ ಆರೋಪಿತರನ್ನ ಬಂಧಿಸಿದ್ದಾರೆ ಎಂದು ಡಿಸಿಪಿ ಸಾರಾ ಫಾತೀಮಾ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News