ಮುಂದಿನ ವರ್ಷದಿಂದ ವಲಯವಾರು ಬಜೆಟ್‍ಗೆ ಬಿಬಿಎಂಪಿ ಚಿಂತನೆ

Update: 2024-11-25 19:58 IST
ಮುಂದಿನ ವರ್ಷದಿಂದ ವಲಯವಾರು ಬಜೆಟ್‍ಗೆ ಬಿಬಿಎಂಪಿ ಚಿಂತನೆ
  • whatsapp icon

ಬೆಂಗಳೂರು : ಪ್ರತಿ ವರ್ಷದಂತೆ 2025ರ ವಾರ್ಷಿಕ ಬಜೆಟ್‍ಗೆ ಸಿದ್ಧತೆ ನಡೆಯುತ್ತಿದ್ದು, ಮುಂದಿನ ಬಜೆಟ್‍ಗಳನ್ನು ವಲಯವಾರು ಹಂಚಿಕೆ ಬಜೆಟ್‍ಗಳಾಗಿ ಸಿದ್ಧಪಡಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಎಷ್ಟು ಹಣ ಖರ್ಚಾಗುತ್ತದೆ ಎಂದು ಈ ಹಿಂದಿನ ಬಜೆಟ್‍ಗಳಲ್ಲಿ ಹಾಕುತ್ತಿರಲಿಲ್ಲ. ಆದರೆ 2025ರ ವಾರ್ಷಿಕ ಬಜೆಟ್ ಅನ್ನು ವಲಯವಾರು ಬಜೆಟ್ ಆಗಿ ಮಂಡಿಸಲಾಗುತ್ತದೆ ಎಂದರು.

ವಲಯವಾರು ಬಜೆಟ್ ಮಂಡಿಸಿದರೆ, ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಬಜೆಟ್ ಹಣ ಹೇಗೆ ಖರ್ಚಾಗುತ್ತದೆ ಎಂದು ತಿಳಿಯುತ್ತದೆ. ವಾರ್ಷಿಕ ಬಜೆಟ್ ಸಿದ್ಧತೆಗೆ ಇದು ಪ್ರಾರಂಭಿಕ ಹಂತವಾಗಿದ್ದು, ವಲಯವಾರು ಆದಾಯದ ಮೇಲೆ ಬಜೆಟ್‍ಅನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಹೈಡೆನ್ಸಿಟಿ ಕಾರಿಡಾರ್, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಮತ್ತು ವಲಯ ಮಟ್ಟದ ರಸ್ತೆಗಳು ಸೇರಿದಂತೆ ಸುಮಾರು 12878.78 ಕಿ.ಮೀ. ಉದ್ದ ರಸ್ತೆ ಜಾಲವಿದ್ದು, ಪ್ರತಿ ರಸ್ತೆಯನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಸದೃಡ ಮತ್ತು ಧೀರ್ಘ ಬಾಳಿಕೆ ಬರುವಂತೆ ವಿನ್ಯಾಸಗೊಳಿಸುವುದು, ನಿರ್ಮಾಣ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಪ್ರಸ್ತುತ ಅತ್ಯಗತ್ಯವಾಗಿರುತ್ತದೆ ಎಂದು ಅವರು ಹೇಳಿದರು.

ನಗರದಾದ್ಯಂತ ರಸ್ತೆಗುಂಡಿ ಮುಚ್ಚುವುದು ಸೇರಿ ಸದೃಡ ಮತ್ತು ಧೀರ್ಘ ಬಾಳಿಕೆ ರಸ್ತೆ ನಿರ್ಮಾಣಕ್ಕಾಗಿ 700 ಕೋಟಿ ರೂ.ಗಳ ಟೆಂಡರ್ ನೀಡಲು ಕರೆಯಲು ನಿರ್ಧರಿಸಲಾಗಿದೆ. ಜನವರಿಯಿಂದ ರಸ್ತೆಗುಂಡಿ ಮುಚ್ಚುವ ಕಾರ್ಯ ನಡೆಯಲಿದೆ. ಟೆಂಡರ್ ಕೊಟ್ಟ 21 ದಿನಗಳಲ್ಲಿ ನಗರದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3,500 ಕೋಟಿ ರೂ.ಗಿಂತ ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಮುಂದಿನ ನಾಲ್ಕು ದಿನದೊಳಗಾಗಿ ಹೆಚ್ಚುವರಿಗೆ 500 ಕೋಟಿ ರೂ. ಹಣ ಸಂಗ್ರಹಿಸಲಾಗುತ್ತದೆ. ಮಾರ್ಚ್ ಅಂತ್ಯದೊಳಗಾಗಿ 5,200 ಕೋಟಿ ರೂ.ಗಳ ತೆರಿಗೆ ಹಣವನ್ನು ಸಂಗ್ರಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಲುವಾಗಿ ಸೂಕ್ತ ಕ್ರಮಗಳನ್ನು ಕೈಗೊಂಡು, ಆಯಾ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಂದ ಕೂಡಲೇ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯಡಿ(ಓಟಿಎಸ್) ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದ್ದು, ಈ ಯೋಜನೆಯು ನ.30ರವರೆಗೆ ಮಾತ್ರ ಜಾರಿಯಲ್ಲಿರಲಿದೆ. ಈ ಸಂಬಂಧ ಪ್ರತಿಯೊಬ್ಬರೂ ಬಾಕಿ ಆಸ್ತಿ ತೆರಿಗೆಯನ್ನು ನ.30ರ ಒಳಗಾಗಿ BBMPtax.karnataka.gov.inಗೆ ಭೇಟಿ ನೀಡಿ ಪಾವತಿಸಬೇಕು. ಇಲ್ಲವಾದಲ್ಲಿ ಡಿ.1ರಿಂದ ಪಾವತಿಸಬೇಕಿರುವ ಬಾಕಿ ಆಸ್ತಿ ತೆರಿಗೆಯು ದುಪ್ಪಟ್ಟಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News