ಸರಕಾರಿ ನಿವೃತ್ತ ನೌಕರರ ಬೇಡಿಕೆ ಈಡೇರಿಸಲು ಕ್ರಮ : ಮಧು ಬಂಗಾರಪ್ಪ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸುವ ಮೂಲಕ ಸರಕಾರಿ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರಿ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಮುಖ್ಯ ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ರಾಜ್ಯ ಸರಕಾರಿ ಹಾಗೂ ನಿವೃತ್ತ ನೌಕರರ ಸಹಕಾರದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಮರೆಯುವಂತಿಲ್ಲ. 2023ರ ಕಾಂಗ್ರೆಸ್ ಪಕ್ಷದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಹಲವು ಪ್ರಣಾಳಿಕೆಗಳಲ್ಲಿ ನಿವೃತ್ತ ನೌಕರರ ಪ್ರಣಾಳಿಕೆಯೂ ಸೇರಿತ್ತು. ಅದರಂತೆ ಬೇಡಿಕೆಗಳನ್ನು ಈಡೇರಿಸುವತ್ತ ಹೆಚ್ಚಿನ ಗಮನವಹಿಸುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ ಮಾತನಾಡಿ, ರಾಜ್ಯ 7ನೆ ವೇತನ ಆಯೋಗವು ಸರಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಗದು ರಹಿತ ಆರೋಗ್ಯ ಸೇವೆ ನೀಡುವ ‘ಸಂದ್ಯಾ ಕಿರಣ’ ಯೋಜನೆಯನ್ನು ಶಿಫಾರಸ್ಸು ಮಾಡಿದೆ. ಹೀಗಾಗಿ ‘ಸಂಧ್ಯಾ ಕಿರಣ’ ನಗದುರಹಿತ ಆರೋಗ್ಯ ಸೇವೆಯನ್ನು ರಾಜ್ಯ ಸರಕಾರ ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸಾ ತಜ್ಞೆ ಡಾ. ಪುಣ್ಯವತಿ ನಾಗರಾಜ್ ಮಾತನಾಡಿ, ಯಾವುದೇ ವ್ಯಕ್ತಿಗೆ 60 ವರ್ಷ ತುಂಬಿದ ನಂತರ ರೋಗನಿರೋಧಕ ಶಕ್ತಿ ಕುಂದುತ್ತಾ ಬರುತ್ತದೆ. ಈ ವೇಳೆಯಲ್ಲಿ ರೋಗಗಳು ಬರುವುದು ಸಾಮಾನ್ಯ. ಆದರೆ ಹೆಚ್ಚು ಚಿಂತಿಸುತ್ತಾ ಕೂರದೇ ರೋಗಗಳನ್ನು ಗೆಲ್ಲುವ ಸಾಮರ್ಥ್ಯ ನಿವೃತ್ತ ನೌಕರರು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿವೃತ್ತ ನೌಕರರಿಗೆ ಆರೋಗ್ಯ ಸೇವೆಯನ್ನು ಜಾರಿಗೆ ತಂದಲ್ಲಿ ತುಂಬಾ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಶಾಸಕ ರಘುನಾಥ್ ಹಾಗೂ ಇತರರಿದ್ದರು.