ಅತ್ತಿಬೆಲೆ ಪಟಾಕಿ ದುರಂತ: ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಸರಕಾರ ಆದೇಶ
ಬೆಂಗಳೂರು, ಅ. 11: ಅತ್ತಿಬೆಲೆ ಪಟಾಕಿ ದುರಂತದ ಹಿನ್ನಲೆಯಲ್ಲಿ ಆನೇಕಲ್ ತಹಶೀಲ್ದಾರ್(ಹಿಂದಿನ) ಶಶಿಧರ ಮಾಡ್ಯಾಳ್ ಸೇರಿದಂತೆ ನಾಲ್ವರು ಅಧಿಕಾರಿ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ನೀಡಿರುವ ವರದಿ ಆಧರಿಸಿ ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ತಹಶೀಲ್ದಾರ್ ಶಶಿಧರ ಮಾಡ್ಯಾಳ್ ಅತ್ತಿಬೆಲೆ ನಾಡಕಚೇರಿ ಉಪತಹಸೀಲ್ದಾರ್ ಶ್ರೀಧರ್.ವಿ.ಸಿ ಅತ್ತಿಬೆಲೆ ವೃತ್ತದ ರಾಜಸ್ವ ನಿರೀಕ್ಷಕ ಪುಷ್ಪರಾಜ್.ಎ ಹಾಗೂ ಗ್ರಾಮ ಆಡಳಿತಾಧಿಕಾರಿ ಭಾಗೇಶ್ ಹೊಸಮನೆ ಅವರನ್ನು ಇಲಾಖೆ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಹಸಿರು ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ಕಾರಣರಾದ ಮತ್ತು ಅಸಮರ್ಪಕ ವರದಿ ಸಲ್ಲಿಸಲು ಕಾರಣರಾದ ಆರೋಪದ ಮೇಲೆ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಿ ಜಂಟಿ ಇಲಾಖೆ ವಿಚಾರಣೆಯನ್ನು ಬಾಕಿ ಇರಿಸಿ ಸೇವಾ ನಿಯಮಗಳ ಅನ್ವಯ ಅಮಾನತುಗೊಳಿಸಲಾಗಿದೆ.
ಇನ್ನೂ, ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನ ಆಧಾರ ಭತ್ಯೆಯನ್ನು ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.