ಅಯೋಧ‍್ಯೆ ರಾಮಮಂದಿರ ಸಂಭ್ರಮಾಚರಣೆ: ಬೆಂಗಳೂರಿನ ಬೀದಿಗಳಲ್ಲಿ ಪ್ರತಿಧ್ವನಿಸಿದ ಕಾಶಿ ಮಥುರಾ ಬಾಕಿ ಇದೆ ಘೋಷಣೆ
ಬೆಂಗಳೂರು: ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನಾ ಸಂಭ್ರಮಾಚರಣೆ ವೇಳೆ ‘ಕಾಶಿ ಮಥುರಾ ಬಾಕಿ ಇದೆ’ ಎಂಬ ಘೋಷಣೆಯು ಬೆಂಗಳೂರಿನ ಜಯನಗರದ ಬೀದಿಗಳಲ್ಲಿ ಪ್ರತಿಧ್ವನಿಸಿದೆ ಎಂದು thenewsminute.com ವರದಿ ಮಾಡಿದೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರವನ್ನು ಜಯನಗರ ಪೊಲೀಸ್ ಠಾಣೆ ಎದುರಿರುವ ವಿನಾಯಕ ದೇವಾಲಯದೆದುರು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರ ನಟಿ ತಾರಾ ಕೂಡಾ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಯನಗರ ನಿವಾಸಿಯೊಬ್ಬರು, “ಇದು ಭಾರತದ ಸುವರ್ಣ ಯುಗ. ಮೋದಿಯವರು ಇದನ್ನು ಸಾಧ‍್ಯವಾಗಿಸಿದ್ದಾರೆ. ನನಗೆ ಅಯೋಧ‍್ಯೆಯಲ್ಲಿನ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಅವಕಾಶ ದೊರೆತಿದ್ದರೆ ಅದು ನನ್ನ ಪಾಲಿನ ಬಹುದೊಡ್ಡ ಗೌರವವಾಗುತ್ತಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸಂದರ್ಭಕ್ಕೆ ಸಮುದಾಯದೊಂದಿಗೆ ಸಾಕ್ಷಿಯಾಗುತ್ತಿರುವುದು ಸಂಭ್ರಮದಾಯಕವಾಗಿದೆ” ಎಂದು ಹೇಳಿದ್ದಾರೆ.
ಜಯನಗರದ ನಿವಾಸಿಯೊಬ್ಬರನ್ನು ಕಾಶಿ ಮತ್ತು ಮಥುರಾ ಕುರಿತು ಪ್ರಶ್ನಿಸಿದಾಗ, ಕೇಸರಿ ಶಾಲು ಧರಿಸಿದ್ದ ಆ ವ್ಯಕ್ತಿ, “ಇದು ಕೇವಲ ಪ್ರಾರಂಭ. ಅವರು ಸಾಕಷ್ಟು ದೇವಾಲಯಗಳನ್ನು ನಾಶಗೊಳಿಸಿದ್ದಾರೆ ಹಾಗೂ ನಾವು ಅಯೋಧ್ಯೆಯಲ್ಲಿ ಮರು ವಶಪಡಿಸಿಕೊಂಡಿರುವುದು ಒಂದು ನಿದರ್ಶನ. ಆದರೆ, ಈ ಹೊತ್ತಿಗೆ ಇದು ಸಂಭ್ರಮದ ಕ್ಷಣ” ಎಂದು ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಲವರು, ನಿನ್ನೆ ಸಾರ್ವತ್ರಿಕ ರಜೆ ಘೋಷಿಸದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆಯನ್ನು ಖಂಡಿಸಿದ್ದಾರೆ. “ಭಾರತದ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನ. ಸರ್ಕಾರ ಹೇಗೆ ರಜೆ ಘೋಷಿಸದಿರಲು ಸಾಧ್ಯ?” ಎಂದು ಕಾರ್ಯಕ್ರಮಕ್ಕೆ ತಮ್ಮ ಪುತ್ರಿಯನ್ನು ಕರೆದುಕೊಂಡು ಬಂದಿದ್ದ 40 ವರ್ಷದ ಟೆಕ್ಕಿಯೊಬ್ಬರು ಪ್ರಶ‍್ನಿಸಿದ್ದಾರೆ.
ರಾಮನ ಪೂರ್ಣಾಕೃತಿಯ ಮೂರ್ತಿಯನ್ನು ತಮ್ಮ ಮಳಿಗೆಯ ಮುಂದೆ ಇರಿಸುವ ಮೂಲಕ ಎಂ.ಜಿ.ರಸ್ತೆಯ ನವರತನ್ ಜ್ಯುಯೆಲರ್ಸ್ನ ನೌಕರರು ಹಾಗೂ ವ್ಯವಸ್ಥಾಪಕ ಮಂಡಳಿಯು ಕಾರ್ಯಕ್ರಮವನ್ನು ಆಚರಿಸಿದರು. ನೌಕರರು ರಸ್ತೆಯಲ್ಲಿ ಪಟಾಕಿಯನ್ನು ಸಿಡಿಸಿ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಾನ್ ವೇಷವನ್ನು ಧರಿಸಿದ್ದ ಕಲಾವಿದರನ್ನೊಳಗೊಂಡ ಮೆರವಣಿಗೆಯೊಂದೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಾಗಿ ಹೋಯಿತು.
ಜನವರಿ 22ರಂದು ಮಧ್ಯಾಹ್ನ 12.20 ಗಂಟೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಪ್ರಾರಂಭಗೊಂಡು, ಮಧ್ಯಾಹ್ನ 12.28 ಗಂಟೆಗೆ ಕೊನೆಗೊಂಡಿತು. ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪೇಜಾವರ ಮಠ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ನೆರವೇರಿತು.