ಕೆರೆ ನೀರು ಕಲುಷಿತಗೊಂಡ ಹಿನ್ನೆಲೆ; ಮೀನುಗಳ ಮಾರಣ ಹೋಮ

Update: 2023-07-03 07:44 GMT

ಚಿಕ್ಕಮಗಳೂರು: ಕೆರೆ ನೀರು ಕಲುಷಿತಗೊಂಡ ಹಿನ್ನೆಲೆ ಸಾವಿರಾರು ಮೀನುಗಳು ಸತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜೋಡಿಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೆರೆ ನೀರು ಕಲುಷಿತಗೊಂಡಿದ್ದೋ, ಅಥವಾ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿದ್ದರಿಂದ ಮೀನುಗಳು ಸಾವನ್ನಪ್ಪಿಯೋ ಎಂಬುದು ಸ್ಪಷ್ಟವಿಲ್ಲ. ಆದರೆ, ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದಾಗಿ ತಿಳಿದು ಬಂದಿದೆ.

ಜೋಡಿ ಲಿಂಗದಹಳ್ಳಿಯ ನೂರಾರು ರೈತರು ಇದೇ ಕೆರೆ ನೀರನ್ನ ಉಪಯೋಗಿಸುತ್ತಿದ್ದಾರೆ. ಸುಮಾರು 57 ಎಕರೆಯನ್ನು ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದು ಒಂದು ಲಕ್ಷಕ್ಕೂ ಅಧಿಕ ಮೀನುಗಳನ್ನ ಕೆರೆಗೆ ಬಿಡಲಾಗಿತ್ತು. ಜಾನುವಾರಗಳು ಹಾಗೂ ಹಳ್ಳಿಗರು ನಿತ್ಯ ಉಪಯೋಗಕ್ಕೆ ಇದೇ ನೀರನ್ನು ಬಳಸುತ್ತಿದ್ದು, ಇದೀಗ ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಕೆರೆಯಲ್ಲಿ ಮೀನುಗಳ ಸಾವಿನಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಆತಂಕ ಕಾಡುತ್ತಿದ್ದು, ವೈಯಕ್ತಿಕ ದ್ವೇಷದ ಹಿನ್ನೆಲೆ ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News