ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್ ಗೆ ನಿರ್ಬಂಧ; ನಿಯಮ ಮೀರಿದರೆ 50 ಸಾವಿರ ರೂ. ದಂಡ: ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಕೆ
ಬೆಂಗಳೂರು, ಆ.8: ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರು ನಗರದಲ್ಲಿ ಮುಂದಿನ ಮೂರು, ನಾಲ್ಕು ದಿನಗಳಲ್ಲಿ ಅನಧಿಕೃತ ಫ್ಲೆಕ್ಸ್ ನಿಬರ್ಂಧ ಹೇರಲಾಗುವುದು. ಈ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಒಂದು ವೇಳೆ ಅನಧಿಕೃತ ಫ್ಲೆಕ್ಸ್ ಹಾಕಿದರೆ ಅವರು ಯಾರೇ ಆದರೂ ಪಾಲಿಕೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿ, ಒಂದು ಫ್ಲೆಕ್ಸ್ ಗೆ ತಲಾ 50 ಸಾವಿರ ರೂ.ದಂಡ ವಿಧಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿರುವ ಕುಮಾರಕೃಪ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನಧಿಕೃತ ಫ್ಲೆಕ್ಸ್ ತೆರವಿಗೆ ಕೋರ್ಟ್ ಮೂರು ವಾರಗಳ ಗಡವು ನೀಡಿದೆ. ನನ್ನದೂ, ಮುಖ್ಯಮಂತ್ರಿಗಳದ್ದೂ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಎಲ್ಲ ಅನಧಿಕೃತ ಫ್ಲೆಕ್ಸ್ ಗಳನ್ನು ನಿಷೇಧಿಸಲಾಗುವುದು. ಈ ವಿಚಾರವಾಗಿ ನಮ್ಮ ಸಚಿವರು ಹಾಗೂ ನಾಯಕರಿಗೆ ಮನವಿ ಮಾಡಿದ್ದೇನೆ. ಫ್ಲೆಕ್ಸ್ ನಿಷೇಧ ಕುರಿತು ಮುಂದಿನ ದಿನಗಳಲ್ಲಿ ನೀತಿ ರೂಪಿಸುತ್ತೇವೆ ಎಂದರು.
ಇನ್ನು ಮುಂದೆ ಜನ್ಮದಿನ, ಶ್ರದ್ಧಾಂಜಲಿ, ಶುಭ ಸಂದೇಶ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ವಿಚಾರ ಸೇರಿದಂತೆ ಯಾವುದೇ ಅನಧಿಕೃತ ಫ್ಲೆಕ್ಸ್ ಹಾಕುವಂತಿಲ್ಲ. ಇದಕ್ಕೆ ಎಲ್ಲ ಪಕ್ಷಗಳು ಹಾಗೂ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡುತ್ತೇನೆ. ಸರಕಾರದಿಂದ ಫ್ಲೆಕ್ಸ್ ಹಾಕುವುದಿದ್ದರೆ ಸಮಯ, ಅಳತೆ, ಸ್ಥಳ ನಿಗದಿ ಮಾಡಿ ಅನುಮತಿ ನೀಡಲಾಗುವುದು. ಇದಕ್ಕೂ ನೀತಿ ರೂಪಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ 59 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. 134 ದೂರುಗಳು ಬಂದಿದ್ದು, 40 ಎಫ್ಐಆರ್ ದಾಖಲಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕಲು ನಿಬರ್ಂಧ ಇರುವುದಿಲ್ಲ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ಸಂಚಾರ ದಟ್ಟಣೆ ನಿಯಂತ್ರಣ: ಎಕ್ಸ್ ಪ್ರೆಷನ್ ಆಫ್ ಇಂಟರೆಸ್ಟ್ ಅವಧಿ ಆ.17 ರವರೆಗೆ ವಿಸ್ತರಣೆ: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಟನಲ್ ರಸ್ತೆ, ಮೇಲ್ಸೇತುವೆ ಸೇರಿದಂತೆ ಪರಿಹಾರ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಇದಕ್ಕಾಗಿ ಬಿಡಿಎ ಹಾಗೂ ಬಿಬಿಎಂಪಿ ಮೂಲಕ ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಅನ್ನು ಕರೆಯಲಾಗಿತ್ತು. ಅದರ ಅವಧಿ ನಿನ್ನೆಗೆ ಮುಕ್ತಾಯಗೊಂಡಿತ್ತು. ಆದರೆ ಇನ್ನು ಹೆಚ್ಚಿನ ಸಂಸ್ಥೆಗಳು ಇದರಲ್ಲಿ ಭಾಗವಹಿಸಲು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಈ ಅವಧಿಯನ್ನು ಒಂದು ವಾರ ಅಂದರೆ ಆ.17 ರವರೆಗೆ ವಿಸ್ತರಿಸಲಾಗಿದೆ. ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಮೆಟ್ರೋ ಸುರಂಗದಲ್ಲಿ ಕೇವಲ ಒಂದು ಮಾರ್ಗದಲ್ಲಿ ಮಾತ್ರ ಚಲಿಸಬಹುದಾಗಿದೆ. ಹೀಗಾಗಿ ಟನಲ್ ರಸ್ತೆಯಲ್ಲಿ ದ್ವಿಮುಖ ಮಾರ್ಗ ಇರಬೇಕು ಎಂದು ಸಲಹೆ ನೀಡಿದ್ದೇನೆ. ಅನೇಕ ಸಂಸ್ಥೆಗಳು ವಿನ್ಯಾಸ, ಆರ್ಥಿಕ ಸಾಮಥ್ರ್ಯದ ಬಗ್ಗೆ ಚರ್ಚೆ ಮಾಡಲು ಮುಂದೆ ಬಂದಿವೆ ಬ್ರ್ಯಾಂಡ್ ಬೆಂಗಳೂರು ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂಬ ವಿಚಾರವಾಗಿ ನಾವು ಅನೇಕ ಸುತ್ತು ಚರ್ಚೆ ಮಾಡಿದ್ದೇವೆ. ಸಾರ್ವಜನಿಕರಿಂದ 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ಇನ್ನು ಕೆಲವರ ಜತೆ ಚರ್ಚೆ ಮಾಡಿ ಸಲಹೆ ಪಡೆಯಲಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಶಾಲಾ ಮಕ್ಕಳಿಂದ, ಹಿರಿಯ ನಾಗರಿಕರು, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದವರಿಂದ ಸಲಹೆಗಳನ್ನು ಪಡೆದಿದ್ದು, ಇವನ್ನು ನಾಲ್ಕೈದು ವಿಭಾಗಗಳಲ್ಲಿ ಪರಿಶೀಲನೆ ಮಾಡಿ ಸಾರಾಂಶ ನೀಡುವ ಜವಾಬ್ದಾರಿಯನ್ನು ಕೆಲವು ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ದಿಲ್ಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದೇನೆ. ನೆಲಮಂಗಲ, ಬಳ್ಳಾರಿ, ಕೋಲಾರ, ಹೊಸೂರು, ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಗಳು ಸೇರುವ ಹಾಗೂ ಬೆಂಗಳೂರು ನಗರದ ರಸ್ತೆಗಳು ಸಂಚಾರದಟ್ಟಣೆಗೆ ಕಾರಣವಾಗಿವೆ. ಇದರ ಪರಿಹಾರಕ್ಕೆ ಕೇಂದ್ರ ಸರಕಾರ ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಯೋಜನೆ ರೂಪಿಸಿಕೊಂಡು ಬನ್ನಿ ಎಂದು ಅವರು ತಿಳಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.