ಬಂಡೀಪುರ: ರಾಂಪುರ ಶಿಬಿರದಲ್ಲಿ ಅಕ್ಕಿರಾಜ ಎಂದೇ ಖ್ಯಾತವಾಗಿದ್ದ ಆನೆ ಸಾವು

Update: 2023-11-01 08:18 GMT

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿದ್ದ ವಿನಾಯಕ ಎಂಬ ಆನೆ ಮಂಗಳವಾರ ಸಾವನ್ನಪ್ಪಿದೆ.

ತರಬೇತಿ ನೀಡುತ್ತಿದ್ದ ಸಂದರ್ಭದಲ್ಲಿ ದಿಢೀರ್‌ ಆಗಿ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಆನೆಗೆ ಅಕ್ಕಿರಾಜ, ವಿನಾಯಗನ್‌ ಎಂಬ ಹೆಸರು ಇದೆ. ಕೊಯಮತ್ತೂರಿನಲ್ಲಿ 2021ರಲ್ಲಿ ಈ ಆನೆಯನ್ನು ಸೆರೆ ಹಿಡಿದು ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡಲಾಗಿತ್ತು.

ಆನೆಯು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಯೆಲಚೆಟ್ಟಿ ಗ್ರಾಮದ ಸುತ್ತಮುತ್ತಲು ದೀರ್ಘ ಸಮಯದಿಂದ ಬೀಡು ಬಿಟ್ಟು ಮನೆಗಳ ಮೇಲೆ ದಾಳಿ ಮಾಡುತ್ತಿತ್ತು. ಪುಂಡಾನೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಅರಣ್ಯ ಇಲಾಖೆಯ ಮೇಲೆ ಒತ್ತಡವನ್ನೂ ಹಾಕಿದ್ದರು.

ಈ ವರ್ಷದ ಜೂನ್‌ ತಿಂಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಆನೆಯನ್ನು ಸೆರೆಹಿಡಿದು, ರಾಂಪುರ ಆನೆ ಶಿಬಿರದಲ್ಲಿ ಬಿಡಲಾಗಿತ್ತು. ಇಲ್ಲಿ ಅದಕ್ಕೆ ಕರ್ಣ ಎಂದು ಹೆಸರಿಡಲಾಗಿತ್ತು.

ಆರೋಗ್ಯವಾಗಿದ್ದ ಆನೆ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ ಎಂದು ಹೆಡೆಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್‌ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News