ಬೆಂಗಳೂರು | ರೈಲುಗಳ ಮೂಲಕ ಮಾಂಸ ಸರಬರಾಜು ಪ್ರಕರಣ : ಆರೋಗ್ಯ ಇಲಾಖೆ ಹೇಳಿದ್ದೇನು?

Update: 2024-07-27 11:18 GMT

ಬೆಂಗಳೂರು : ಮೆಜೆಸ್ಟಿಕ್‌ನ ಕ್ರಾಂತಿಕಾರಿ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಯೊಬ್ಬರು ತೆಗೆದುಕೊಂಡು ಹೋಗುತ್ತಿದ್ದ ಕುರಿ ಮಾಂಸದ ಬಾಕ್ಸ್ ಗಳನ್ನು ತೆಗೆಸಿ ಈ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಪುನೀತ್ ಕೆರೆಹಳ್ಳಿ‌ ಸಾಕ್ಷ್ಯಾಧಾರ ರಹಿತ ಆರೋಪ ಮಾಡಿರುವ ಘಟನೆ ಶುಕ್ರವಾರ ವರದಿಯಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಘಟನೆ ಸಂಬಂಧ ಸ್ಪಷ್ಟನೆ ನೀಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆಹಾರ ಸುರಕ್ಷತೆ ಮತ್ತು‌ ಗುಣಮಟ್ಟ‌ ಇಲಾಖೆಯ ಆಯುಕ್ತರು, ಜುಲೈ 26 ರಂದು ಮಾಧ್ಯಮಗಳಲ್ಲಿ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಸುದ್ದಿಗಳು ಭಿತ್ತರವಾಗಿರುತ್ತದೆ. ಈ ಕುರಿತಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ವತಿಯಿಂದ‌ ಅಗತ್ಯ ‌ಕ್ರಮಗಳನ್ನು ವಹಿಸಲಾಗಿದೆ. ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ಕುರಿ ಮತ್ತು ಇತರೆ ಪ್ರಾಣಿಗಳ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಪರಿಶೀಲಿಸಲು ಪೋಲಿಸ್ ಇಲಾಖೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ತಪಾಸಣೆ ಮಾಡಿರುತ್ತಾರೆ ಎಂದು ತಿಳಿಸಿದೆ.

ಘಟನೆ ಸಂಬಂಧ ವ್ಯಾಪ್ತಿಯ ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ. ಪರಿಶೀಲನೆ ಸಂಧರ್ಭದಲ್ಲಿ ರಾಜಸ್ಥಾನದಿಂದ ಬಂದ ರೈಲಿನ ಮೂಲಕ ಸ್ವೀಕೃತವಾದ ಪಾರ್ಸೆಲ್‌ಗಳನ್ನು ನಿಲ್ದಾಣದ ಹೊರ ಆವರಣದಲ್ಲಿ ಸಾಗಾಣಿಕೆ ವಾಹನದಲ್ಲಿರಿಸಿರುವುದು ಕಂಡುಬಂದಿರುತ್ತದೆ. ಒಟ್ಟು 90 ಸಂಖ್ಯೆಯ ಪಾರ್ಸೆಲ್‌ಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ ಪ್ರಾಣಿಯ ಮಾಂಸವಿರುವುದು ಕಂಡುಬಂದಿರುತ್ತದೆ. ಯಾವ ಪ್ರಾಣಿಯ ಮಾಂಸವೆಂದು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿಯನ್ನು ಸಂಗ್ರಹಿಸಿ, ಆಹಾರ ಪ್ರಯೋಗಾಲಯಕ್ಕೆ ವಿಶ್ಲೇಷಣೆಗಾಗಿ ಸಲ್ಲಿಸಲಾಗಿರುತ್ತದೆ ಎಂದು ಹೇಳಿದೆ.

ವಿಶ್ಲೇಷಣಾ ಫಲಿತಾಂಶದ ಆಧಾರದ ಮೇಲೆ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುತ್ತದೆ. ಪಾರ್ಸೆಲ್‌ಗಳನ್ನು ಕಳುಹಿಸಿದವರ ಮತ್ತು ಸ್ವೀಕರಿಸಿದವರ ಎಫ್‌ಎಸ್‌ಎಸ್‌ಎಐ ಪರವಾನಿಗೆ ಸೇರಿಂದತೆ ವಿವರವಾದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಲೋಪದೋಷಗಳು ಕಂಡುಬಂದಲ್ಲಿ ನಿಯಾಮನುಸಾರ ಮುಂದಿನ ಕಾನೂನು ಕ್ರಮಜರುಗಿಸಲಾಗುವುದು ಎಂದು‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News