ಬೆಂಗಳೂರು | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ತಂದೆ-ಮಗನ ಬಂಧನ
ಬೆಂಗಳೂರು, ಆ.16: ಐದು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ತಂದೆ-ಮಗನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಸುಂಕದಕಟ್ಟೆ ಚಂದನ ಲೇಔಟ್ ನಿವಾಸಿ ನಾಗರಾಜು ಮತ್ತು ಆತನ 17 ವರ್ಷದ ಮಗ ಬಂಧಿತರಾಗಿದ್ದು, ಈ ಆರೋಪಿಗಳ ವಿರುದ್ಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಾಗರಾಜ್ ಕ್ರಷರ್‌ವೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತನ 17 ವರ್ಷದ ಮಗ ಪ್ರಥಮ ಪಿಯು ವಿದ್ಯಾರ್ಥಿಯಾಗಿದ್ದಾನೆ ಎನ್ನಲಾಗಿದೆ.
ದೌರ್ಜನ್ಯ ಎಸಗಿದ ಈ ಆರೋಪಿಗಳು ಸಂತ್ರಸ್ತೆಯ ತಾಯಿಯ ಸಂಬಂಧಿಕರಾಗಿದ್ದರು. ಹೀಗಾಗಿ, ಸಂತ್ರಸ್ತೆಯ ತಾಯಿ ಕೆಲಸಕ್ಕೆ ತೆರಳುವ ವೇಳೆ ತನ್ನ ಐದು ವರ್ಷದ ಬಾಲಕಿಯನ್ನು ಸಂಬಂಧಿಕರಾದ ಆರೋಪಿ ನಾಗರಾಜ್ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಸಂತ್ರಸ್ತೆಯ ತಾಯಿ ಮಗುವನ್ನು ಆರೋಪಿ ನಾಗರಾಜ ಮನೆಯಲ್ಲಿ ಬಿಟ್ಟು ತೆರಳಿದಾಗ ಮಗುವಿನ ಮೇಲೆ ತಂದೆ-ಮಗ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನಲಾಗಿದೆ.
ಇತ್ತೀಚೆಗೆ ಬಾಲಕಿಯ ವರ್ತನೆಯಲ್ಲಿ ಕೆಲವು ಬದಲಾವಣೆಯಾದ ಕಾರಣ ತಾಯಿ ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ, ಬಾಲಕಿಯು ನಡೆದ ಘಟನೆ ಬಗ್ಗೆ ವಿವರಿಸಿದ್ದು, ಬಳಿಕ ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಚಿತವಾಗಿದೆ. ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.