ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಾತಿ: 1,016 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡಿ ಆದೇಶ

Update: 2024-11-17 14:16 GMT

ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂಬಂಧಿಸಿ 1,016 ಅಭ್ಯರ್ಥಿಗಳಿಗೆ ನ.16ರಂದು ಆನ್‍ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗಿದ್ದು, ಅದರಂತೆ ಸ್ಥಳ ಆಯ್ಕೆ ಮಾಡಿಕೊಂಡವರಿಗೆ ಸ್ಥಳ ನಿಯುಕ್ತಿ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ರವಿವಾರ ಪ್ರಕಟನೆ ಹೊರಡಿಸಿರುವ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಮಂಜೂರಾದ ಹುದ್ದೆಗಳಲ್ಲಿ ಒಟ್ಟು 1,654 ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ 1,016 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ನೇಮಕಾತಿ ಪೂರ್ವದಲ್ಲಿ ಶೇ.73.58 ಇದ್ದ ಕಾರ್ಯನಿರತ ಖಾಯಂ ಬೋಧಕರ ಸಂಖ್ಯೆಯನ್ನು ಶೇ.88.85ಕ್ಕೆ ಹೆಚ್ಚಿಸಲಾಗಿದೆ ಎಂದಿದ್ದಾರೆ.

ಈ ನೇಮಕಾತಿಗೆ ಮೊದಲು, ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಖಾಯಂ ಅಧ್ಯಾಪಕರು ಹಾಗೂ ಪಾಠ ಪ್ರವಚನಗಳ ಕೊರತೆಯಿಂದಾಗಿ ತೊಂದರೆಗೀಡಾಗಿದ್ದರು. ಪ್ರಸ್ತುತ ನೇಮಕಾತಿಯಿಂದಾಗಿ ಇಲಾಖಾ ವ್ಯಾಪ್ತಿಯಲ್ಲಿನ ಕಲ್ಯಾಣ ಕರ್ನಾಟಕ ಭಾಗವನ್ನೂ ಒಳಗೊಂಡಂತೆ, ಗ್ರಾಮೀಣ ಭಾಗದ ಸರಕಾರಿ ಕಾಲೇಜುಗಳಿಗೆ ಪೂರ್ಣಕಾಲಿಕ ಅಧ್ಯಾಪಕರನ್ನು ನೇಮಕಗೊಂಡಂತಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

2021ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 26 ವಿವಿಧ ವಿಷಯಗಳಲ್ಲಿ ಖಾಲಿ ಇದ್ದ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿತ್ತು.

ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, 2023ರಲ್ಲಿ ಪ್ರಕಟಿಸಿರುವ 1,208 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಇದರಲ್ಲಿ 211 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕಭಾಗಕ್ಕೆ ಸೇರಿದವರಾಗಿದ್ದರು. ಈಗ ಅರ್ಹ 1,016 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಆದೇಶವನ್ನು ಹೊರಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News