ಬೆಂಗಳೂರು | ಹಾರ್ನ್ ಮಾಡಿದ್ದಕ್ಕೆ ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ: ಮೂವರ ಬಂಧನ

Update: 2023-07-14 13:40 GMT

ಬಂಧಿತ ಆರೋಪಿಗಳು (ಫೋಟೋ -Twitter@BlrCityPolice )

ಬೆಂಗಳೂರು, ಜು.14: ಕಾರು ಚಾಲಕನೊಬ್ಬನನ್ನು ವಿನಾಕಾರಣ ಅಡ್ಡಗಟ್ಟಿ ಕಾರಿನ ಗಾಜು ಒಡೆದು, ಚಾಲಕನ ಮೇಲೆ ಹಲ್ಲೆ ನಡೆಸಿದ್ದ ಮೂವರನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ವರ್ತೂರು ಬಳಿಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರಿಂದ ಮುಂದೆ ಸಾಗಲು ಆಗದ ಕಾರು ಚಾಲಕ ಹಾರ್ನ್ ಮಾಡಿದ್ದಾನೆ. ಇದೇ ಕಾರಣಕ್ಕೆ ಸಿಟ್ಟಾದ ಪುಂಡರ ಗುಂಪೊಂದು, ಕಾರನ್ನು ಹಿಂಬಾಲಿಸಿ ಬಂದು ಅಡ್ಡಗಟ್ಟಿ ಕಾರು ಚಾಲಕನ ಜೊತೆಗೆ ಜಗಳ ತೆಗೆದು, ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಗ್ಯಾಂಗ್, ಗುಂಜೂರು ಗೇಟ್‍ನ ಅಪಾರ್ಟ್ ಮೆಂಟ್ ಬಳಿಯಲ್ಲಿ ಚಾಲಕನ ಜೊತೆಗೆ ಗಲಾಟೆ ತೆಗೆದಿದ್ದು, ಆ ಬಳಿಕ ಕಾರಿನ ಗ್ಲಾಸ್ ಒಡೆದು, ಚಾಲಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಕಾರಿನ ಚಾಲಕನ ಮೊಬೈಲ್ ಹಾಗೂ ಅಪಾರ್ಟ್ ಮೆಂಟ್ ಬಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ಟ್ವೀಟ್ ಮೂಲಕ ಚಾಲಕ ನಗರ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಮನವಿ ಮಾಡಿದ್ದರು ಎಂದು ತಿಳಿದುಬಂದಿದ್ದು, ಕೂಡಲೇ ಪ್ರತಿಕ್ರಿಯೆ ನೀಡಿರುವ ಬೆಂಗಳೂರು  ಪೊಲೀಸರು, ವರ್ತೂರು ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಿದ್ದರು. ನಂತರ ಇಂತಹ ಅಶಿಸ್ತಿನ ನಡವಳಿಕೆ ಅಥವಾ ಗೂಂಡಾಗಿರಿಗೆ ಅವಕಾಶವಿರುವುದಿಲ್ಲ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು ಎಂದು ತಿಳಿದುಬಂದಿದೆ.

ಈ ಸಂಬಂಧ ಮೂವರನ್ನು ಬಂಧಿಸಿದ್ದು, ಮಾತ್ರವಲ್ಲದೆ ಈ ಬಗ್ಗೆ ಪೊಲೀಸರು ಇಂತಹ ಸಹಿಷ್ಣುತೆಯನ್ನು ಸಹಿಸುವುದಿಲ್ಲ. ಆರೋಪಿಗಳನ್ನು ಬಂಧಿಸಲಾಗಿದೆ. ಭವಿಷ್ಯದಲ್ಲಿ, ತಕ್ಷಣ ಮತ್ತು ತ್ವರಿತವಾಗಿ ಇಂತಹ ಘಟನೆ ಕಂಡು ಬಂದರೆ ದಯವಿಟ್ಟು ನಮ್ಮ 112 ಅನ್ನು ಡಯಲ್ ಮಾಡಿ ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News