ಬೆಂಗಳೂರು| ಅಕ್ರಮ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ: 86.87 ಲಕ್ಷ ರೂ. ಜಪ್ತಿ
ಬೆಂಗಳೂರು: ಚಿನ್ನದ ವ್ಯಾಪಾರಿಯ ಫ್ಲ್ಯಾಟ್‍ನಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿಯ ವಿಶೇಷ ವಿಚಾರಣಾದಳದ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿರುವುದು ವರದಿಯಾಗಿದೆ.
ಜಿನೇಂದ್ರ, ಮನೀಶ್, ಮುಕೇಶ್, ಲಲಿತ್, ರೋಹಿತ್ ಹಾಗೂ ಸಂಜಯ್ ಎಂಬುವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ. ಜೂಜಾಟದ ಸ್ಥಳದಲ್ಲಿ ದಾಖಲೆ ಇಲ್ಲದ ಎರಡು ಹಣದ ಬ್ಯಾಗ್‍ಗಳು ಪತ್ತೆಯಾಗಿದ್ದು, ಒಟ್ಟು 86.87 ಲಕ್ಷ ರೂ. ಹಣ ಜಪ್ತಿ ಮಾಡಲಾಗಿದೆ.
ನಗರದ ಜೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‍ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟ್‍ನಲ್ಲಿ ಜೂಜಾಟ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳ ತಂಡ ಆಟದ ಟೇಬಲ್ ಮೇಲಿದ್ದ 1.48 ಲಕ್ಷ ರೂ. ಹಣ ಜಪ್ತಿ ಮಾಡಿದ್ದು, ಅದೇ ಫ್ಲ್ಯಾಟ್‍ನಲ್ಲಿ ಮತ್ತಷ್ಟು ಶೋಧ ನಡೆಸಿದಾಗ 85.39 ಲಕ್ಷ ರೂ. ಪತ್ತೆಯಾಗಿದೆ.
ಹಣದ ಬ್ಯಾಗ್‍ಗಳಿದ್ದ ಮನೆ ಮಾಲಕ ರಾಜ್ ಜೈನ್ ಪರಾರಿಯಾಗಿದ್ದಾನೆ. ಚಿನ್ನದ ವ್ಯಾಪಾರಿಯಾಗಿರುವ ರಾಜ್ ಜೈನ್ ಈ ಹಿಂದೆ ಚಿನ್ನ ಕಳವಾಗಿದೆ ಎಂದು ಸುಳ್ಳು ದೂರು ನೀಡಿದ್ದನು. ತನಿಖೆ ಕೈಗೊಂಡಾಗ ರಾಜ್ ಜೈನ್ ಕೃತ್ಯ ಬಯಲಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.