ಬೆಂಗಳೂರು | ಈಡಿ ದಾಳಿ ಪ್ರಕರಣ: 11.25 ಕೋಟಿ ರೂ. ನಗದು, 120 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಒಟ್ಟು ಎಂಟು ಸ್ಥಳಗಳಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ(ಈಡಿ) ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 11.25 ಕೋಟಿ ರೂ. ನಗದು, 120 ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ದಾಖಲೆಗಳನ್ನು ಜಪ್ತಿ ಮಾಡಿರುವುದಾಗಿ ಮಂಗಳವಾರ ತಿಳಿಸಿದೆ.
ಈ ಸಂಬಂಧ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಾರಿ ನಿರ್ದೇಶನಾಲಯ, ಫೆ.29 ಮತ್ತು ಮಾ.1ರಂದು ಆರೋಪಿ ವಿಜಯ್ ಆರ್. ಟಾಟಾ ಮತ್ತು ಸಹಚರರಿಗೆ ಸಂಬಂಧಿಸಿದ ಮನೆ, ಕಚೇರಿ ಸೇರಿದಂತೆ ಒಟ್ಟು ಎಂಟು ಸ್ಥಳಗಳಲ್ಲಿ ಪಿಎಂಎಲ್‍ಎ 2002ರ ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದೆ.
ದಾಳಿಯಲ್ಲಿ ಆರೋಪಿಗಳ ಬ್ಯಾಂಕ್ ಖಾತೆಯಿಂದ 11.25 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಅಂದಾಜು 120 ಕೋಟಿ ರೂ. ಮೌಲ್ಯದ ಸ್ಥಿರ/ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಈಡಿ ತಿಳಿಸಿದೆ.
ಆರ್.ಎಸ್.ಚಂದ್ರಶೇಖರ್, ಮುನಿರಾಜು ಕೆ., ಡಿ.ನಾಗೇಂದ್ರ ಬಾಬು, ಮಂಜುನಾಥ್.ಬಿ.ಎಸ್ ಮತ್ತು ಸಂಬಂಧಿತ ಕಂಪೆನಿಗಳ ಕಚೇರಿಗಳ ಮೇಲೆ ಹಾಗೂ ಸಂಚಯ ಲ್ಯಾಂಡ್ ಆ್ಯಂಡ್ ಎಸ್ಟೇಟ್ ಪ್ರೈ. ಲಿಮಿಟೆಡ್, ಬಿಸಿಸಿ ಕನ್ಟ್ರಕ್ಷನ್ಸ್ ಪ್ರೈ. ಲಿಮಿಟೆಡ್, ಆಕಾಶ್ ಎಜುಕೇಶನ್ ಅಂಡ್ ಡೆವಲಪ್‍ಮೆಂಟ್ ಟ್ರಸ್ಟ್, ಎಸ್.ವಿ.ಕಾಂಕ್ರೀಟ್ ಪ್ರಾಜೆಕ್ಟ್ಸ್ ಪ್ರೈವೇಟ್, ಎಂ/ಎಸ್ ಸಂಚಯ ಲ್ಯಾಂಡ್ & ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣಗಳು ಇದಾಗಿದೆ ಎಂದು ಈಡಿ ಮಾಹಿತಿ ನೀಡಿದೆ.