ಬೆಂಗಳೂರು | ರೇವ್ ಪಾರ್ಟಿ ಪ್ರಕರಣ : 1,086 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

Update: 2024-09-12 15:22 GMT

ಬೆಂಗಳೂರು : ನಗರದ ಹೆಬ್ಬಗೋಡಿ ಸಮೀಪದ ಜಿ.ಎಂ.ಫಾರ್ಮ್ ಹೌಸ್‍ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ 1,086 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ ಉದ್ಯಮಿಗಳು ಸೇರಿ 79 ಮಂದಿ ಡ್ರಗ್ಸ್ ಸೇವನೆ ಮಾಡಿರುವ ಅಂಶವನ್ನು ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ವಿಜಯವಾಡ ಮೂಲದ ಉದ್ಯಮಿ ಎಲ್.ವಾಸು ಮಾಲಕತ್ವದ ವಿಕ್ಟರಿ ಈವೆಂಟ್ ಮ್ಯಾನೇಜ್‍ಮೆಂಟ್ ಕಂಪೆನಿ ಮೇ.19ಕ್ಕೆ ಒಂದು ವರ್ಷ ಪೂರ್ಣಗೊಂಡಿತ್ತು. ಜತೆಗೆ ಮಾಲಕ ಎಲ್.ವಾಸುನ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡದಾಗಿ ಪಾರ್ಟಿ ಮಾಡುವ ಸಲುವಾಗಿ ಹೆಬ್ಬಗೋಡಿ ಬಳಿ ಜಿ.ಎಂ.ಫಾರ್ಮ್‍ಹೌಸ್ ಬುಕ್ ಮಾಡಲಾಗಿತ್ತು.

ಪಾರ್ಟಿ ಆಯೋಜನೆಗಾಗಿ 10 ಲಕ್ಷ ರೂ. ಖರ್ಚು ಮಾಡಲಾಗಿತ್ತು. ನಟಿ ಹೇಮಾ ಸೇರಿದಂತೆ ಹಲವು ರಂಗದ ತಾರೆಯರು, ಉದ್ಯಮಿಗಳಿಗೆ ಆಹ್ವಾನ ನೀಡಿದ್ದರು. ಪಾರ್ಟಿಯಲ್ಲಿ ಊಟ, ಮೋಜು-ಮಸ್ತಿ ಜೊತೆಗೆ ಡ್ರಗ್ಸ್ ಪಾರ್ಟಿ ಇರಲಿದೆ ಎಂದು ಮೊದಲೇ ತಿಳಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿತರು ಬಂದಿದ್ದರು.

ರೇವ್ ಪಾರ್ಟಿಯಲ್ಲಿ ಆತಿಥ್ಯ ನೀಡಿದ್ದ ಎಲ್.ವಾಸು, ದಂತವೈದ್ಯ ರಣಧೀರ್ ಬಾಬು, ಮುಹಮ್ಮದ್ ಅಬೂಬಕರ್ ಸಿದ್ದಿಕ್ಕಿ ಅವರು ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಕೊಕೇನ್, ಎಂಡಿಎಂಎ ಹಾಗೂ ಹೈಡ್ರೋಗಾಂಜಾ ನೀಡಿದ್ದರು. ಅಲ್ಲದೆ, ಪಾರ್ಟಿಯಲ್ಲಿ ಹೇಮಾ ಸಹ ಮಾದಕವಸ್ತು ಸೇವಿಸಿರುವುದು ದೃಢವಾಗಿದೆ ಎಂದು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿರುವುದಾಗಿ ಮೂಲಗಳು ತಿಳಿಸಿವೆ.

ಪಾರ್ಟಿಯಲ್ಲಿ ಇನ್ನಿತರ ನಟಿಯರು ಭಾಗಿಯಾಗಿದ್ದರು. ಆದರೆ, ಅವರು ಡ್ರಗ್ಸ್ ಸೇವಿಸರಲಿಲ್ಲ. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಾಗೂ ಜಿ.ಎಂ.ಫಾರ್ಮ್ ಹೌಸ್ ಸಿಬ್ಬಂದಿ ಸೇರಿ 82 ಮಂದಿಯನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News