ಬೆಂಗಳೂರು| ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ; ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ: ಸಚಿವ ಮಧುಬಂಗಾರಪ್ಪ
ಬೆಂಗಳೂರು: ‘ರಾಜ್ಯದಲ್ಲಿ ಕಾನೂನು ಇದ್ದು, ಸರಕಾರವೂ ಇದೆ. ಯಶವಂತಪುರ ಕ್ಷೇತ್ರದ ಆಂಧ್ರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ಶಿಕ್ಷಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಶಾಲಾ ಮಕ್ಕಳಿಂದ ಈ ರೀತಿಯ ಕೆಲಸವನ್ನು ಮಾಡಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಯಾವುದೇ ಕಾರಣಕ್ಕೂ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಮಾಲೂರು ಘಟನೆ ಹಾಗು ಅಂಧ್ರಹಳ್ಳಿ ವಿಚಾರದಲ್ಲಿ ವಿದ್ಯಾವಂತರಿಂದಲೇ ಇಂತಹ ಘಟನೆಗಳು ನಡೆಯುತ್ತಿರುವುದು ದುರ್ದೈವ. ಇವರಿಗೆಲ್ಲಾ ನಾಚಿಕೆಯಾಗಬೇಕು. ಈ ಘಟನೆ ಸಂಬಂಧ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಒಂದು ಘಟನೆ ಬಹಿರಂಗವಾದ ನಂತರ ಹಿಂದಿನ ಘಟನೆಗಳು ಬಹಿರಂಗವಾಗುವುದನ್ನು ನೋಡಿದ್ದೇನೆ. ಹೀಗಾಗಿ ಮೊದಲು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಮಾಹಿತಿ ಪಡೆಯಲಾಗುತ್ತದೆ. ನಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಿದರೂ ಇಂತಹ ಘಟನೆಗಳನ್ನು ನೋಡಿ ಸುಮ್ಮನೆ ಕುಳಿತುಕೊಳ್ಳಲಾಗದು ಎಂದು ಅವರು ತಿಳಿಸಿದರು.
‘ಯಶವಂತಪುರದ ಸರಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಘಟನೆ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದು, ಇದರಲ್ಲಿ ತಪ್ಪಿತಸ್ಥರನ್ನು ಬಿಡುವುದಿಲ್ಲ. ಇತ್ತೀಚೆಗೆ ಕೋಲಾರದ ಶಾಲೆಯ ಘಟನೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮಕ್ಕಳನ್ನು ನಾವು ಯಾವ ರೀತಿ ನಡೆಸಿಕೊಳ್ಳಬೇಕೋ ಆ ರೀತಿ ನಡೆಸಿಕೊಳ್ಳಬೇಕು. ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸಲು ಅವಕಾಶ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
‘ಒಂದು ಬಾರಿಯಾದರೆ ಅಚಾತುರ್ಯ ಎನ್ನಬಹುದು, 2ನೇ ಬಾರಿ ದಡ್ಡತನ, ಆದರೆ ಪದೇಪದೆ ನಡೆಯುತ್ತಿದೆ ಎಂದರೆ ವ್ಯವಸ್ಥೆಯೇ ಹೀಗಿದೆ ಎಂದೇ ಅರ್ಥ. ಮಧುಬಂಗಾರಪ್ಪ ಅವರು ಯಾವ ಎಸಿ ಕೊಠಡಿಯಲ್ಲಿ ಕೂತು ಕಾಲ ಕಳೆಯುತ್ತಿದ್ದಾರೆ?. ಬಿಸಿಯೂಟ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನೂ ತಿಂಗಳಾನುಗಟ್ಟಲೆ ಬಿಡುಗಡೆ ಮಾಡದೆ ಅವರ ದುಡ್ಡಲ್ಲಿ ಮೋಜು ಮಾಡಿಕೊಳ್ಳುವ ಸರಕಾರ, ಶೌಚಾಲಯ ಶುಚಿ ಮಾಡುವ ಹೊರೆಯನ್ನು ಮಕ್ಕಳ ಮೇಲೆಯೇ ಹೊರಿಸಿದೆ. ಮಕ್ಕಳೇ ಶೌಚಾಲಯ ಶುಚಿ ಮಾಡುವುದರ ಹೊರತು ಬೇರೆ ದಾರಿಯೇ ಇಲ್ಲದೆ, ಪೆನ್ಸಿಲ್ ಹಿಡಿಯಬೇಕಾದ ಮಕ್ಕಳು ಫಿನಾಯಿಲ್ ಹಿಡಿಯಬೇಕಾದ ದುಸ್ಥಿತಿ ಬಂದೊದಗಿದೆ’ ಎಂದು ಬಿಜೆಪಿ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.