ಬೆಂಗಳೂರು | ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ: ದಂಪತಿ ಸೇರಿ ಮೂವರ ಬಂಧನ

Update: 2023-08-15 16:50 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.15: ವಯೋವೃದ್ಧರನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಜಯನಗರ ಪೆÇಲೀಸರು ಬಂಧಿಸಿರುವುದು ವರದಿಯಾಗಿದೆ.

ನಿವೃತ್ತ ಸರಕಾರಿ ನೌಕರನಾಗಿರುವ ಸುಧೀಂದ್ರ ಎಂಬುವರು ನೀಡಿದ ದೂರಿನ ಮೇರೆಗೆ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮೂಲತಃ ಕೊಡಗಿನವರಾಗಿದ್ದು, ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.‌

ಪ್ರಕರಣದ ವಿವರ:  

ಪ್ರಕರಣ ಪ್ರಮುಖ ಆರೋಪಿ ಅಣ್ಣಮ್ಮ ತನ್ನ ಮಗುವಿಗೆ ಹುಷಾರಿಲ್ಲ, ಹಣಕಾಸಿನ ನೆರವು ನೀಡುವಂತೆ ಪರಿಚಯಸ್ಥರಾಗಿದ್ದ ಸುಧೀಂದ್ರ ಅವರನ್ನು ಕೋರಿಕೊಂಡಿದ್ದಳು. ಸಂಕಷ್ಟ ನೋಡಲಾರದೆ ಅವರು ಈಕೆಗೆ ಐದು ಸಾವಿರ ರೂ. ಸಹಾಯ ಮಾಡಿದ್ದರು. ನಂತರ ಇಬ್ಬರ ನಡುವಿನ ಪರಿಚಯ ಸಲುಗೆಗೆ ತಿರುಗಿತ್ತು.

ವಿವಿಧ ಕಾರಣಗಳನ್ನು ನೀಡಿ ಸುಧೀಂದ್ರ ಅವರಿಂದ ಅಣ್ಣಮ್ಮ ಹೆಚ್ಚಿನ ಹಣ ಪಡೆದುಕೊಂಡಿದ್ದಳು. ಒಂದು ತಿಂಗಳ ಬಳಿಕ ಹೂಸ್ಕೂರು ಗೇಟ್ ಬಳಿ ಲಾಡ್ಜ್ ವೊಂದರ ರೂಮ್‍ಗೆ ಕರೆಯಿಸಿಕೊಂಡಿದ್ದ ಅಣ್ಣಮ್ಮ, ಸುಧೀಂದ್ರನೊಂದಿಗೆ ಲೈಂಗಿಕ ಕ್ರಿಯೆ ಮಾಡಿದ್ದಳು. ಅಲ್ಲದೇ, ರಹಸ್ಯವಾಗಿ ವಿಡಿಯೋ ಮಾಡಿಕೊಂಡಿದ್ದಳು. ಇದೇ ರೀತಿ ಎರಡು ಬಾರಿ ಕರೆಯಿಸಿಕೊಂಡು ಬಲವಂತದಿಂದ ಲೈಂಗಿಕವಾಗಿ ವರ್ತಿಸಿದ್ದಳು. ಬಳಿಕ ಹಣ ನೀಡದಿದ್ದರೆ ಈ ಲೈಂಗಿಕ ಕ್ರಿಯೆಯ ಫೋಟೋ ಹಾಗೂ ವಿಡಿಯೋಗಳನ್ನು ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಳು. ಅಲ್ಲದೇ ಸ್ನೇಹ ಎಂಬಾಕೆಗೂ ಕಳುಹಿಸಿ ಆಕೆಯಿಂದ ಬ್ಲ್ಯಾಕ್ ಮೇಲ್ ಮಾಡಿಸಿದ್ದಳು. ಇದಕ್ಕೆ ಹೆದರಿದ ಸುಧೀಂದ್ರ ಅವರು ಹಂತ-ಹಂತವಾಗಿ 82 ಲಕ್ಷ ರೂ.ಗಳವರೆಗೂ ನೀಡಿದ್ದಾರೆ. ಈ ಕೃತ್ಯಕ್ಕೆ ಸ್ನೇಹ ಪತಿ ಲೋಕೇಶ್ ಸಾಥ್ ನೀಡಿದ್ದ.

ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತೆ 42 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇವರ ಬೆದರಿಕೆ ಕಾಟ ತಾಳಲಾರದೆ ಜಯನಗರ ಪೊಲೀಸರಿಗೆ ಸುಧೀಂದ್ರ ದೂರು ನೀಡಿದ್ದರು. ಇದರಂತೆ ಕಾರ್ಯಾಚರಣೆ ಕೈಗೊಂಡು ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News