ವಿದೇಶಿಯರ ಪಾಸ್‌ ಪೋರ್ಟ್ ವಶಕ್ಕೆ ಪಡೆಯಲು ಬ್ಯಾಂಕ್ ಗೆ ಅಧಿಕಾರವಿಲ್ಲ: ಹೈಕೋರ್ಟ್

Update: 2024-01-17 15:40 GMT

ಬೆಂಗಳೂರು: ವಿದೇಶಿ ಪೌರತ್ವ ಹೊಂದಿರುವವರ ಪಾಸ್‌ ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ(ಒಸಿಐ) ಕಾರ್ಡ್ ವಶಕ್ಕೆ ಪಡೆಯುವುದಕ್ಕೆ ಬ್ಯಾಂಕ್ ಗೆ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ತನ್ನ ಪಾಸ್‌ ಪೋರ್ಟ್ ಮತ್ತು ಒಸಿಐ ಕಾರ್ಡ್ ಅನ್ನು ವಶಕ್ಕೆ ಪಡೆದಿದ್ದ ಕ್ರಮವನ್ನು ಪ್ರಶ್ನಿಸಿ ಯುಕೆ ಪೌರತ್ವ ಹೊಂದಿರುವ ಕೋಶಿ ವರ್ಗೀಸ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

2022ರ ಅ.17ರಿಂದ ಬ್ಯಾಂಕ್ ವಶದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ಪಾಸ್‌ ಪೋರ್ಟ್ ಮತ್ತು ಒಐಸಿ ಕಾರ್ಡನ್ನು ಹಿಂದಿರುಗಿಸಲು ಕೋರ್ಟ್ ನಿರ್ದೇಶನ ನೀಡಿದೆ. ಅರ್ಜಿದಾರರು ಗ್ರೇಟ್ ಬ್ರಿಟನ್ ನ ಪ್ರಜೆಯಾಗಿದ್ದು, ಭಾರತದಲ್ಲಿ 2017ರಿಂದ ಭಾರತದಲ್ಲಿ ನೆಲೆಸಲು ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್(ಒಸಿಐ) ಅನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‍ಆರ್ ಆರ್ ಒ) ನೀಡಿದೆ. ಪಾಸ್‌ ಪೋರ್ಟ್ ನೀಡುವ ಸಂದರ್ಭದಲ್ಲಿ ಇಲ್ಲಿಯ ಯಾವುದೇ ಕಾನೂನುಗಳ ಅಡಿಯಲ್ಲಿ ನೀಡಿಲ್ಲ ಎಂದು ಕೋರ್ಟ್ ಹೇಳಿದೆ.

ಒಸಿಐ ಕಾರ್ಡ್ ಅನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದೇಶಿ ಪ್ರಜೆ ಭಾರತದಲ್ಲಿ ಉಳಿಯುವುದಕ್ಕಾಗಿ ನೀಡುವ ಅನುಮತಿಯಾಗಿದೆ. ಇದು ಅಧಿಕಾರಿಗಳಿಗೆ ಮತ್ತೆ ಹಿಂದಿರುಗಿಸಬೇಕಾದ ವಸ್ತು. ಅರ್ಜಿದಾರರ ಒಸಿಐ ಕಾರ್ಡ್ ಮತ್ತು ಪಾಸ್‌ ಪೋರ್ಟ ನ್ನು ಬ್ಯಾಂಕ್ ಅಧಿಕಾರಿಗಳಿಗೆ ಠೇವಣಿ ಬದಲು ಸ್ವಯಂಪ್ರೇರಿತವಾಗಿ ನೀಡಿದ್ದರೂ ಅದನ್ನು ಬ್ಯಾಂಕ್ 15 ದಿನಕ್ಕಿಂತಲೂ ಹೆಚ್ಚು ಕಾಲ ತನ್ನಲ್ಲಿಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿತು.

ಅರ್ಜಿದಾರರ ಒಸಿಐ ಎಫ್‍ಆರ್ ಆರ್ ಒ ಕಚೇರಿಗೆ ಬ್ಯಾಂಕ್ ಅಧಿಕಾರಿಗಳು ಹಿಂದಿರುಗಿಸಬೇಕಾಗಿತ್ತು. ಅಗತ್ಯವಿದ್ದಲ್ಲಿ ಎಫ್‍ಆರ್ ಆರ್ ಒ ಕಚೇರಿ ಅಧಿಕಾರಿಗಳು ಅರ್ಜಿದಾರರ ವಿರುದ್ಧ ಕ್ರಮಕ್ಕೆ ಮುಂದಾಗಬಹುದಿತ್ತು. ಆದರೆ, ಬ್ಯಾಂಕ್ ಈ ಕಾರ್ಯಕ್ಕೆ ಮುಂದಾಗದೆ, ತನ್ನಲ್ಲಿ ಉಳಿಸಿಕೊಂಡಿರುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ಪೀಠ ತಿಳಿಸಿತು.

ಪಾಸ್‌ ಪೋರ್ಟ್ ಯುಕೆಯಿಂದ ಪಡೆದುಕೊಂಡಿದ್ದು, ಭಾರತದಲ್ಲಿ ಅದನ್ನು ವಶಕ್ಕೆ ಪಡೆಯುವುದಕ್ಕೆ ಅಧಿಕಾರವಿಲ್ಲ. ಆದರೆ, ಬ್ಯಾಂಕ್ ಈ ಎರಡೂ ವಸ್ತುಗಳನ್ನು ನಾಲ್ಕು ವರ್ಷಗಳ ಕಾಲ ತನ್ನಲ್ಲಿಟ್ಟುಕೊಂಡಿದೆ. ಹೀಗಾಗಿ, ಎರಡೂ ದಾಖಲೆಗಳನ್ನು ಅರ್ಜಿದಾರರಿಗೆ ಹಿಂದಿರುಗಿಸಬೇಕು ಎಂದು ಪೀಠ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News