ಸಾಮೂಹಿಕ ಅತ್ಯಾಚಾರ ಪ್ರಕರಣಗಳ ತನಿಖೆಗೆ ಎಸ್‍ಐಟಿ ರಚಿಸಲು ಬಸವರಾಜ ಬೊಮ್ಮಾಯಿ ಆಗ್ರಹ

Update: 2024-01-13 09:23 GMT

ಬೆಂಗಳೂರು: ಹಾವೇರಿ ಸಹಿತ ವಿವಿಧ ಜಿಲ್ಲೆಗಳ ಪೊಲೀಸರಿಂದ ಸ್ಥಳೀಯ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲು ಅಸಾಧ್ಯ. ಆದ್ದರಿಂದ, ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ (ಗ್ಯಾಂಗ್ ರೇಪ್) ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಬೇಕು ಎಂದು  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಾಚಾರ, ಕಿರುಕುಳ, ಹಿಂಸಾಚಾರ ಹೆಚ್ಚಾಗಿದೆ. ಗ್ರಾಮಾಂತರದಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ. ಇಂಥ ಹಲವಾರು ಪ್ರಕರಣಗಳನ್ನು ಮುಚ್ಚಿಹಾಕುತ್ತಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡಿದರೆ ಅವರ ಮೇಲೆ ಸರಕಾರದ ವಕ್ರದೃಷ್ಟಿ ಕಾಡುತ್ತಿದೆ. ನಿಗದಿತ ಕಾಲಾವಧಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿ ಚಾರ್ಜ್ ಶೀಟ್ ಹಾಕಿ ಉಗ್ರವಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಾಮಾನ್ಯ ಜನರು ಅದರಲ್ಲೂ ಹೆಣ್ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಹೆಣ್ಮಕ್ಕಳು ಆತಂಕದಿಂದ ಓಡಾಡುವಂತಾಗಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರಲ್ಲೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ. 30ರಷ್ಟು ಹೆಚ್ಚಾಗಿವೆ ಎಂದು ಆಕ್ಷೇಪಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ವಿಧಾನಸೌಧದ ಅತ್ಯಂತ ಹತ್ತಿರ ಇರುವ ಒಬ್ಬ ಹೆಣ್ಮಗಳನ್ನು ಸಾರ್ವಜನಿಕವಾಗಿ ಥಳಿಸಿ ವಿವಸ್ತ್ರಗೊಳಿಸಿದ್ದು ಈ ಸರಕಾರದ ಮತ್ತು ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದ್ದನ್ನು ತೋರಿಸಿತ್ತು. ಸಾರ್ವಜನಿಕರು ತಮ್ಮ ರಕ್ಷಣೆ ಬಗ್ಗೆ ಭಯಪಡುವ ಸ್ಥಿತಿ ಉಂಟಾಗಿತ್ತು. ಕೇವಲ ಆಸ್ಪತ್ರೆಗೆ ಹೋಗಿ ನೋಡಿದರೆ ಮುಗಿಯಿತೇ? ಸರಿಯಾದ ತನಿಖೆ ಆಗಿಲ್ಲ. ಹಲವರ ಬಂಧನ ನಡೆದಿಲ್ಲ. ದಲಿತ ಮಹಿಳೆಯೊಬ್ಬರಿಗೆ ಹೀಗಾಗಿಯೂ ಮುಖ್ಯಮಂತ್ರಿಗಳಿಂದ ಕ್ರಮ ಇಲ್ಲ ಎಂದು ದೂರಿದರು.

ಹಾವೇರಿಯಲ್ಲಿ ನಮ್ಮನ್ನು ಯಾರೂ ಮುಟ್ಟುವುದಿಲ್ಲ ಎಂಬ ಪರಿಸ್ಥಿತಿ ಕೆಲವು ವರ್ಗದ್ದು. ಹಲವೆಡೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಶಿರಸಿಯ ಒಬ್ಬ ಹೆಣ್ಮಗಳು ಮತ್ತು ಬೇಕಾದವರು ಹಾನಗಲ್‍ನಲ್ಲಿ ಹೋಟೆಲ್‍ನಲ್ಲಿ ಇದ್ದರೆ ಅಕ್ಕಿಆಲೂರಿನ ಯುವಕರು ಇಬ್ಬರನ್ನೂ ಥಳಿಸಿ ಅವಳ ಗ್ಯಾಂಗ್ ರೇಪ್ ಮಾಡಿದ್ದಾರೆ. ಪೊಲೀಸರು ಇದನ್ನು ಮುಚ್ಚಿ ಹಾಕಲು ಮುಂದಾಗಿದ್ದರು. ಸಮುದಾಯ ನೋಡಿ ಕೇಸು ಹಾಕುವಂತೆ ಸ್ಟಾಂಡರ್ಡ್ ಇನ್‍ಸ್ಟ್ರಕ್ಷನ್ ಕೊಟ್ಟಿದ್ದೀರಾ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.

 ಗ್ರಾಮೀಣ ಪೊಲೀಸ್ ಸ್ಟೇಷನ್‍ಗಳು ಕಲೆಕ್ಷನ್ ಅಡ್ಡಾ ಆಗಿ ಪರಿವರ್ತನೆಗೊಂಡಿವೆ. ಕೆಲವೆಡೆ ಇಸ್ಪೀಟ್, ಮದ್ಯದ ದಂಧೆಗೆ ಪೊಲೀಸರೇ ಪ್ರೋತ್ಸಾಹ ಕೊಡುತ್ತಿದ್ದಾರೆ. ಕರ್ನಾಟಕವು ಜಂಗಲ್ ರಾಜ್ಯ ಆಗಿದೆ. ಕಾಂಗ್ರೆಸ್ ಸ್ಥಳೀಯ ನಾಯಕರ ಬೆಂಬಲದಿಂದ ಪುಡಿ ರೌಡಿಗಳು ಮತ್ತೆ ಇಸ್ಪೀಟ್ ಕ್ಲಬ್, ಜೂಜು ಆರಂಭಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಕಾನೂನಿನ ಮೇಲೆ ನಂಬಿಕೆ ಇಟ್ಟಿಲ್ಲ. ಪೊಲೀಸ್ ಸ್ಟೇಷನ್‍ಗಳ ಮೇಲೆ ಬೆಂಕಿ ಹಾಕಿದ ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದ ಬಂಧಿತ ಹಲವು ಆರೋಪಿಗಳು ಅಮಾಯಕರೆಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇದು ವಿರೋಧಾಭಾಸವಲ್ಲವೇ? ಅಲ್ಪಸಂಖ್ಯಾತರ ತುಷ್ಟೀಕರಣ ಮೇರೆ ಮೀರಿದೆ ಎಂದು ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ ಕೇಸಿಲ್ಲದಿದ್ದರೂ ಬಂಧಿಸಲಾಗಿದೆ. ವಿಪಕ್ಷ ನಾಯಕರನ್ನೂ ಬಂಧಿಸಿ ಕೇಸು ಹಾಕಿದ್ದಾರೆ. ಹಾನಗಲ್‌ ನಲ್ಲಿ ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ಅತ್ಯಾಚಾರ ಆಗಿದ್ದರೂ ಗೃಹ ಸಚಿವರು ಸಮರ್ಪಕ ಕ್ರಮಕ್ಕೆ ಮುಂದಾಗಿಲ್ಲ. ಪ್ರಭಾವಿಗಳ ಬಗ್ಗೆ ಇವರ ಕಾಳಜಿ ಇದೆ ಎಂದು ಟೀಕಿಸಿದರು.

ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.




Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News