ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ | ಸೌಹಾರ್ದಯುತ ಇತ್ಯರ್ಥಕ್ಕೆ ಪ್ರಯತ್ನ : ಬಸವರಾಜ ಹೊರಟ್ಟಿ

Update: 2025-03-01 17:22 IST
ಸಿ.ಟಿ.ರವಿ-ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣ |  ಸೌಹಾರ್ದಯುತ ಇತ್ಯರ್ಥಕ್ಕೆ ಪ್ರಯತ್ನ : ಬಸವರಾಜ ಹೊರಟ್ಟಿ

 ಬಸವರಾಜ ಹೊರಟ್ಟಿ

  • whatsapp icon

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಹಾಗೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ನಡುವಿನ ಪ್ರಕರಣವನ್ನು ಈ ಬಾರಿಯ ಅಧಿವೇಶನದಲ್ಲಿ ಸೌಹಾರ್ದಯುತವಾಗಿ ಇತ್ಯರ್ಥಪಡಿಸಲು ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶನಿವಾರ ವಿಧಾನಸೌಧದ ಕೊಠಡಿಯಲ್ಲಿ ವಿಧಾನ ಪರಿಷತ್ತಿನ ನೂರ ಐವತ್ತೈದನೆಯ ಅಧಿವೇಶನ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆದ ವೇಳೆ ಘಟನೆಯಾಗಿದೆ. ಅದು ಕೂಡ ವಿಧಾನಪರಿಷತ್‍ನ ಸಭಾಂಗಣದ ಒಳಗೆ ನಡೆದಿರುವುದರಿಂದ ವಿವಾದಗಳು ತಲೆ ಎತ್ತಿವೆ. ಈ ಸಂಬಂಧ ಪ್ರಕರಣವನ್ನು ನೈತಿಕ ಸಮಿತಿಗೆ ಒಪ್ಪಿಸಲಾಗಿದೆ ಎಂದರು.

ಅಲ್ಲಿ ಇಬ್ಬರನ್ನೂ ಕರೆಸಿ ಪರಸ್ಪರ ಮಾತುಕತೆಯ ಮೂಲಕ ಒಳ್ಳೆಯ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಪಿ.ಎಚ್.ಪೂಜಾರ್ ಅವರ ಅಧ್ಯಕ್ಷತೆಯ ನೈತಿಕ ಸಮಿತಿ ನೀಡುವ ವರದಿಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆಯೂ ಸೂಚಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನೈತಿಕ ಸಮಿತಿಗೆ ಸಿ.ಟಿ.ರವಿ ಈ ಮೊದಲು ಅಧ್ಯಕ್ಷರಿದ್ದರು. ಘಟನೆಯಾದ ತಕ್ಷಣವೇ ಅವರನ್ನು ಬದಲಾವಣೆ ಮಾಡಿ ಪಿ.ಎಚ್.ಪೂಜಾರ್ ಅವರನ್ನು ನೇಮಿಸಲಾಗಿದೆ ಎಂದ ಅವರು, ವಿಧಾನಮಂಡಲದಲ್ಲಿ ಚರ್ಚೆಯ ಗುಣಮಟ್ಟ ಮೊದಲಿನಂತಿಲ್ಲ. ಈ ಮೊದಲು ಬಹುತೇಕ ಶಾಸಕರು ಶಾಸಕರ ಭವನದಲ್ಲೇ ಉಳಿಯುತ್ತಿದ್ದರು. ಅಧಿವೇಶನ ಮುಗಿದರೆ ಶಾಲಾ ಮಕ್ಕಳಂತೆ ಸಾಲುಗಟ್ಟಿ ಹೋಗುತ್ತಿದ್ದರು. ಈಗ ಎಲ್ಲರೂ ಬದಲಾಗಿದ್ದಾರೆ. ಒಂದೇ ದಿನ 22 ವಿಧೇಯಕಗಳನ್ನು ಅಂಗೀಕರಿಸಿದ ಉದಾಹರಣೆಗಳಿವೆ. ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಉತ್ತಮವಾಗಿ ಅಧಿವೇಶನ ನಡೆಸುತ್ತೇವೆ. ಚರ್ಚೆಯ ಗುಣಮಟ್ಟವೂ ಉತ್ತಮವಾಗಿರುತ್ತದೆ ಎಂದರು.

ಜೈಲು ಶಿಕ್ಷೆ ವಿಧಿಸಿದ್ದ ಸಭಾಪತಿ: ಉತ್ತರ ಪ್ರದೇಶದ ಘಟನೆಯೊಂದನ್ನು ಪ್ರಸ್ತಾಪಿಸಿದ ಬಸವರಾಜ ಹೊರಟ್ಟಿ, 1965ರಲ್ಲಿ ಸದಸ್ಯರೊಬ್ಬರು ಸಭಾಪತಿಯವರ ವಿರುದ್ದ ದಿಕ್ಕಿಗೆ ತಿರುಗಿ ನಮಸ್ಕಾರ ಹಾಕಿದ್ದರು. ಇದಕ್ಕಾಗಿ ಆ ಸದಸ್ಯರನ್ನು ಅಮಾನತುಗೊಳಿಸಿ 8 ದಿನ ಜೈಲು ಶಿಕ್ಷೆ ವಿಧಿಸಿ ಸಭಾಪತಿ ಆದೇಶ ನೀಡಿದ್ದರು.

ಸದಸ್ಯನೋರ್ವ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆಯಾಜ್ಞೆ ತಂದಾಗ ಸಭಾವತಿಯವರು ನ್ಯಾಯಾಧೀಶರ ಬಂಧನಕ್ಕೆ ಆದೇಶ ಹೊರಡಿಸಿದ್ದರು. ಕೊನೆಗೆ ನ್ಯಾಯಾಧೀಶರು ಹೆದರಿ ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ಮನೆಯಲ್ಲಿ ಅಡಗಿಕೊಂಡಿದ್ದರು. ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ಮನೆಯಲ್ಲಿದ್ದಾಗ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಒಂದಷ್ಟು ವಿಳಂಬವಾಗಿತ್ತು ಎಂದರು.

ಕೊನೆಗೆ ಅದು ರಾಷ್ಟ್ರಪತಿ ಅಂಗಳಕ್ಕೂ ಹೋಗಿತ್ತು. ಸಭಾಪತಿಯವರ ತಿರ್ಪು ಅಂತಿಮ ಎಂದು ನ್ಯಾಯಾಲಯ ಪುನರ್ ಆದೇಶ ಹೊರಡಿಸಿದ್ದರಿಂದ ವಿವಾದಕ್ಕೊಳಗಾದ ಸದಸ್ಯ ಜೈಲುಶಿಕ್ಷೆ ಅನುಭವಿಸಲೇಬೇಕಾಯಿತು. ಆಗೆಲ್ಲಾ ಸಭಾಪತಿಯವರ ಮಾತೇ ಅಂತಿಮ ಎಂಬಂತಿತ್ತು. ಆದರೆ ಈಗ ಪರಿಸ್ಥಿತಿ ಹಾಗೆ ಇಲ್ಲ ಎಂದು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News