ಕೇದಾರನಾಥ ಅರ್ಚಕರ ವಿಡಿಯೋವನ್ನು ಮೋದಿ ಯೌವನದ ವಿಡಿಯೋ ಎಂದು ಹಂಚಿಕೊಂಡ ಬಿ.ಸಿ. ಪಾಟೀಲ್‌

Update: 2024-01-07 09:44 GMT

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೈಯನ್ನು ಬಳಸಿ ಕೇದರನಾಥ ಪ್ರದಕ್ಷಿಣೆ ಮಾಡುತ್ತಾರೆಂದು ವಿಡಿಯೋ ಹಂಚಿ ಮಾಜಿ ಸಚಿವ ಬಿಸಿ ಪಾಟೀಲ್ ಅವರು ತೀವ್ರ ಮುಜುಗರಕ್ಕೀಡಾಗಿದ್ದಾರೆ.

"ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ" ಎಂದು ವ್ಯಕ್ತಿಯೊಬ್ಬರು ಕೈಗಳ ಮೂಲಕ ನಡೆಯುತ್ತಿರುವ ವಿಡಿಯೋವನ್ನು ಬಿಸಿ ಪಾಟೀಲ್ ಅವರು X ನಲ್ಲಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತ ಮಹಮ್ಮದ್ ಝುಬೈರ್ ಅವರು, ನಿಮಗೆ ವಾಟ್ಸಪಿನಲ್ಲಿ ಬರುವುದೆಲ್ಲವೂ ಸತ್ಯ ಅಲ್ಲ ಎಂದು ಹೇಳಿ ವಿಡಿಯೋದಲ್ಲಿರುವ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ಸರ್, ನಿಮಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಬರುವ ಪ್ರತಿಯೊಂದು ವಿಷಯವೂ ನಿಜವಲ್ಲ. ಅದು ಪ್ರಧಾನಿ ಮೋದಿ ಅವರು 26 ವರ್ಷದವರಾಗಿದ್ದಾಗಿನ ವಿಡಿಯೋ ಅಲ್ಲ. ಈ ವೀಡಿಯೊ 2021 ರಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ಕೇದಾರನಾಥ ದೇವಾಲಯದ ಅರ್ಚಕ ಸಂತೋಷ್ ತ್ರಿವೇದಿ ಅವರದ್ದು" ಎಂದು ಝುಬೈರ್ ಪ್ರತಿಕ್ರಿಯಿಸಿದ್ದಾರೆ.

ಅದಾಗ್ಯೂ, ಈ ಬಗ್ಗೆ ಉದ್ದೇಶಪೂರ್ವಕವಾಗಿ ಬಿಸಿ ಪಾಟೀಲ್ ಅವರು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಕೆಲವು ನೆಟ್ಟಿಗರು ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಇಂತಹ ಸುಳ್ಳುಗಳನ್ನು ಹರಡುವುದು ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News