ಅಮಿತ್ ಶಾ ಆಶೀರ್ವಾದದಿಂದ ರಾಘವೇಂದ್ರ‌ ಅವರನ್ನು ಸೋಲಿಸುತ್ತೇನೆ : ಕೆ.ಎಸ್. ಈಶ್ವರಪ್ಪ

Update: 2024-04-03 18:19 GMT

ಹೊಸದಿಲ್ಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭೇಟಿಗೆ ಅವಕಾಶ ಸಿಕ್ಕಿಲ್ಲ. ನಾನು ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಅಮಿತ್‌ ಶಾ ಕರೆಯ ಹಿನ್ನೆಲೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರು ದಿಲ್ಲಿಗೆ ತೆರಳಿದ್ದು, ಬುಧವಾರ ಅಮಿತ್‌ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,"ಗೃಹ ಸಚಿವರು ನನಗೆ ದೂರವಾಣಿ ಕರೆ ಮಾಡಿ ಬುಧವಾರ ದಿಲ್ಲಿಗೆ ಬನ್ನಿ ಎಂದಿದ್ದರು. ಅದಕ್ಕಾಗಿ ಬಂದೆ. ಆದರೆ, ಇಲ್ಲಿಗೆ ಬಂದ ಬಳಿಕ ಅಮಿತ್‌ ಶಾ ಅವರ ಕಚೇರಿಯಿಂದ ಫೋನ್‌ ಬಂತು. ಅಮಿತ್‌ ಶಾ ಅವರು ಸದ್ಯಕ್ಕೆ ಸಿಗುವುದಿಲ್ಲ ಎಂಬ ಸಂದೇಶ ಬಂದಿದೆ. ಇದರ ಅರ್ಥ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದಾಗಿದೆ. ಬಿ.ವೈ.ರಾಘವೇಂದ್ರ ಸೋಲಬೇಕು ಎಂಬುದು ಇದರ ಅರ್ಥವಾಗಿದೆ ಎಂದು ಹೇಳಿದ್ದಾರೆ.

ಅಮಿತ್‌ ಶಾ ಅವರು ಸಿಗದೆ ಇರಲು ಕಾರಣವೂ ಇದೆ. ಅವರು ನನ್ನನ್ನು ಭೇಟಿಯಾಗಿದ್ದರೂ ನಾನು ಚುನಾವಣೆಯಲ್ಲಿ ನಿಲ್ಲುತ್ತಿದ್ದೆ. ಆದರೆ, ಇವತ್ತು ಅಮಿತ್‌ ಶಾ ಅವರು ಸಿಕ್ಕಿಲ್ಲ ಎನ್ನುವ ಅರ್ಥವೇ, ನಾನು ಚುನಾವಣೆಯಲ್ಲಿ ನಿಲ್ಲಬೇಕು ಎಂಬುದು, ರಾಘವೇಂದ್ರ ವಿರುದ್ಧ ಗೆಲ್ಲಬೇಕು ಎಂಬುದಾಗಿದೆ. ಭೇಟಿಗೆ ಸಿಗದ ಕಾರಣ ನಾನು ವಾಪಸ್‌ ಹೋಗುತ್ತಿದ್ದೇನೆ. ಯಾರನ್ನೂ ಭೇಟಿಯಾಗುವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಆಶೀರ್ವಾದದಿಂದ ಗೆಲ್ಲುತ್ತೇನೆ ಎಂದು ತಿಳಿಸಿದರು.

ಬಿಜೆಪಿಯ ನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ. ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಒಂದು ನೀತಿ, ನಮಗೆ ಒಂದು ನೀತಿಯೇ? ಅವರ ಮನೆಯಲ್ಲಿ ಒಬ್ಬ ಸಂಸದ, ಮತ್ತೊಬ್ಬ ಶಾಸಕ ಇದ್ದಾರೆ. ಶಾಸಕರಾದವರು ಬಿಜೆಪಿ ರಾಜ್ಯಾಧ್ಯಕ್ಷ ಬೇರೆ ಆಗಿದ್ದಾರೆ. ಎಲ್ಲರ ಸಹಕಾರದಲ್ಲಿ ನಾನು ಚುನಾವಣೆ ಗೆದ್ದು ಮೋದಿ ಅವರ ಕೈ ಬಲಪಡಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News