ಬೆಲೇಕೇರಿ ಅದಿರು ನಾಪತ್ತೆ ಪ್ರಕರಣ : ಶಾಸಕ ಸತೀಶ್ ಸೈಲ್ ಸೇರಿ ಇತರರಿಗೆ ನಾಳೆ(ಅ.26) ಶಿಕ್ಷೆ ಪ್ರಕಟ

Update: 2024-10-25 16:28 GMT

ಬೆಂಗಳೂರು : ಬೆಲೇಕೇರಿ ಬಂದರಿನಲ್ಲಿ ನಡೆದ ಅದಿರು ನಾಪತ್ತೆ ಪ್ರಕರಣ ಸಂಬಂಧ ಶಾಸಕ ಸತೀಶ್ ಸೈಲ್ ಸೇರಿ ಇತರರು 'ದೋಷಿ' ಎಂದಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಶಿಕ್ಷೆ ಪ್ರಮಾಣದ ತೀರ್ಪನ್ನು ಶನಿವಾರ(ಅ.26) ಕಾಯ್ದಿರಿಸಿದೆ.

ಶುಕ್ರವಾರ ಶಿಕ್ಷೆ ಪ್ರಮಾಣ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾದ ಪ್ರತಿವಾದ ಆಲಿಸಿದ ಬಳಿಕ ಶನಿವಾರ ಆದೇಶ ಪ್ರಕಟಿಸಲಿ ಎಂದು ಮೂಲಗಳು ದೃಢಪಡಿಸಿವೆ.

ಇನ್ನೂ, ಸಿಬಿಐ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್.ಹೇಮಾ, ಆರೋಪಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳಸಾಗಣಿಕೆಯಲ್ಲಿ ಭಾಗಿಯಾಗಿದ್ದು, ಗರಿಷ್ಠ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಬೇಕೆಂದು ಕೋರಿದರು.

ಮತ್ತೊಂದೆಡೆ, ಶಾಸಕ ಸತೀಶ್ ಸೈಲ್ ಪರ ಹಿರಿಯ ವಕೀಲ ಮೂರ್ತಿ ಡಿ.ನಾಯ್ಕ್ ವಾದ ಮಂಡಿಸಿ, ಸತೀಶ್ ಸೈಲ್ ಅವರಿಗೆ ಅನಾರೋಗ್ಯದ ಸಮಸ್ಯೆಗಳಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ಆಧಾರದಲ್ಲಿಯೇ ಜಾಮೀನು ಪಡೆದುಕೊಂಡಿದ್ದರು ಎಂದರು.

ಅಷ್ಟೇ ಅಲ್ಲದೆ, ಕಳ್ಳತನ, ಭ್ರಷ್ಟಾಚಾರ ಕಾಯ್ದೆಯಡಿ ಗರಿಷ್ಠ ಶಿಕ್ಷೆ ಮೂರು ವರ್ಷಗಳಾಗಿದೆ. ಆದ್ದರಿಂದ 3 ವರ್ಷಕ್ಕಿಂತಲೂ ಕನಿಷ್ಠ ಶಿಕ್ಷೆ ವಿಧಿಸಬೇಕು ಎಂದು ಅವರು ಉಲ್ಲೇಖಿಸಿದರು.

ಕಾರವಾರದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ.ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ ನಿನ್ನೆ ತೀರ್ಪು ಪ್ರಕಟಿಸಿದ್ದು, ಸದ್ಯ ದೋಷಿಗಳೆಂದು ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಎಲ್ಲ 7 ಮಂದಿಯನ್ನೂ ಬಂಧಿಸಿದ್ದಾರೆ.

7 ಮಂದಿ ಕಾರಾಗೃಹಕ್ಕೆ: ಶಾಸಕ ಸತೀಶ್ ಸೈಲ್, ಬಂದರು ಅಧಿಕಾರಿ ಮಹೇಶ್ ಬಿಳಿಯ, ಲಾಲ್ ಮಹಲ್ ಕಂಪೆನಿಯ ಮಾಲಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪೆನಿ ಮಾಲಕ ಕೆ.ವಿ.ನಾಗರಾಜ್, ಗೋವಿಂದರಾಜು, ಆಶಾಪುರ ಕಂಪೆನಿ ಮಾಲಕ ಚೇತನ್ ಎಂಬುವರನ್ನು ಬಂಧಿಸಿ, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News