ಬೆಳಗಾವಿ | ಮರಾಠಾ ಮತ್ತು ದಲಿತ ಯುವಕರ ಮಧ್ಯೆ ಘರ್ಷಣೆ: ಶಾಸಕರಿಗೆ ಗಾಯ

Update: 2023-09-22 18:52 GMT

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ತೋಪನಕಟ್ಟಿ ಗ್ರಾಮದ ಸ್ಮಶಾನ ಭೂಮಿ ಬಳಿ ದಲಿತ ಯುವಕರು ಕುಳಿತುಕೊಂಡಿದ್ದನ್ನು ಆಕ್ಷೇಪಿಸಿದ ಸವರ್ಣಿಯರ ಯುವಕರ ಗುಂಪಿನ ಮಧ್ಯೆ ಘರ್ಷಣೆ ನಡೆದಿದ್ದು, ಕೆಲವರಿಗೆ ಗಾಯಗಳಾಗಿದ್ದು, ಪೊಲೀಸರು ಲಾಠಿ ಪ‍್ರಹಾರ ಮಾಡಿರುವ ಘಟನೆ ಶುಕ್ರವಾರ ವರದಿಯಾಗಿದೆ. 

ಮರಾಠಾ ಮತ್ತು ದಲಿತ ಯುವಕರ ಮಧ್ಯೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

40 ಮಂದಿ ಯುವಕರ ವಿರುದ್ಧ ಪ್ರಕರಣ ದಾಖಲು

ʼʼಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗುಂಪುಗಳ ಸುಮಾರು 40 ಮಂದಿ ಯುವಕರ ವಿರುದ್ಧ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬುಧವಾರ (ಸೆಪ್ಟೆಂಬರ್ 20) ಗಣೇಶ ಚತುರ್ಥಿ ಹಿನ್ನೆಲೆ ದಲಿತ ಸಮುದಾಯದ ಯುವಕರು ಹುಂದರಿ ಹಬ್ಬ ಆಚರಿಸಿ, ಬಳಿಕ ಅದೇ ದಿನ ರಾತ್ರಿ ಮರಾಠಾ ಸಮುದಾಯದ ಸ್ಮಶಾನ ಭೂಮಿ ಬಳಿ ಗುಂಪಾಗಿ ಸೇರಿದ್ದರು ಎನ್ನಲಾಗಿದೆ. ಅಲ್ಲಿಗೆ ಬಂದ ಮರಾಠಾ ಯುವಕರ ಗುಂಪೊಂದು ದಲಿತ ಸಮುದಾಯದ ಯುವಕರ ಬಳಿ ತಕರಾರು ತೆಗೆದು, ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ. 

ಈ ಘಟನೆಯನ್ನು ಖಂಡಿಸಿ ಶುಕ್ರವಾರ ದಲಿತ ಸಮುದಾಯದ ಯುವಕರು ಮರಾಠಾ ಯುವಕರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ವಿರುದ್ಧವಾಗಿ ಮರಾಠಾ ಸಮುದಾಯದವರೂ ನೂರಾರು ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈ ವಿಷಯ ತಿಳಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಪೊಲೀಸರೊಂದಿಗೆ ಸ್ಥಳಕ್ಕೆ ಬಂದು ಎರಡೂ ಗುಂಪಿನ ಮುಖಂಡರ ಜೊತೆ ಮಾತುಕತೆ ನಡೆಸಿದರು. ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸುವಾಗಲೇ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಆರಂಭಿಸಿದರು. ಇದರಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು ಎಂದು ಹೇಳಲಾಗಿದೆ.

ಯುವಕರ ನಡುವಿನ ಘರ್ಷಣೆ ವೇಳೆ ಶಾಸಕರ ರಕ್ಷಣೆಗೆ ಪೊಲೀಸರು ಮುಂದಾದಾಗ, ಅವರನ್ನು ಎರಡೂ ಕಡೆಯವರು ಅತ್ತಿತ್ತ ಎಳೆದಾಡಿದರು. ಈ ವೇಳೆ ಶಾಸಕರಿಗೆ ಮೈಕೈ ನೋವಾಯಿತು. ಪ್ರಾಥಮಿಕ ಚಿಕಿತ್ಸೆ ಪಡೆದ ಅವರು, ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಪರಿಸ್ಥಿತಿ ಹತೋಟಿಗೆ ತಂದರು. ಸದ್ಯ ಗ್ರಾಮದಲ್ಲಿ ಬಿಗಿ ಬಂಬೋಬಸ್ತ್ ಮಾಡಲಾಗಿದೆ.

ಶಾಸಕರ ವಿರುದ್ಧ ಅಸಮಾಧಾನ 

ʼʼತೋಪನಕಟ್ಟಿ ಗ್ರಾಮ ಖಾನಾಪುರ ಶಾಸಕ ವಿಠ್ಠಲ್ ಹಲಗೆಕರ ಅವರ ಸ್ವಗ್ರಾಮವಾಗಿದ್ದು, ಶಾಸಕರು ಎರಡು ಸಮುದಾಯದ ನಡುವಿನ ಜಗಳ ಬಗೆಹರಿಸುವದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆʼʼ ಎಂದು ಭೀಮ್ ಆರ್ಮಿ‌ ಸಂಘಟನೆಯ ಸದಸ್ಯರು ಆರೋಪಿಸಿದ್ದಾರೆ.

Full View

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News